ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಪ್ರೇಮ್ ಪ್ರಕಾಶ್ನನ್ನು ಇಡಿ ಬಂಧನ ಮಾಡಿದೆ. ಕೇಂದ್ರೀಯ ಸಂಸ್ಥೆ ಜಾರ್ಖಂಡ್‌ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ. ಸ್ಥಳಗಳಲ್ಲಿ ವಸುಂಧರಾ ಅಪಾರ್ಟ್‌ಮೆಂಟ್‌ನಲ್ಲಿ ಇರುವ ಪ್ರಕಾಶ್ ಅವರ ಫ್ಲಾಟ್, ಹರ್ಮು ಚೌಕ್ ಬಳಿಯ ಅವರ ನಿವಾಸ 'ಶೈಲೋದಯ' ಮತ್ತು ಹರ್ಮುಂಡ್‌ನಲ್ಲಿರುವ ಅವರ ಕಚೇರಿ ಸೇರಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ನಡೆಯುತ್ತಿರುವ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕೇಂದ್ರೀಯ ಸಂಸ್ಥೆ ಎರಡು ಎಕೆ 47 ರೈಫಲ್ಸ್ ಮತ್ತು 60 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿತ್ತು. ಪ್ರೇಮ್ ಪ್ರಕಾಶ್ ಅವರ ನಿವಾಸದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ - ಎನ್‌ಸಿಆರ್‌ನ ಸುಮಾರು 17-20 ಸ್ಥಳಗಳಲ್ಲಿ ಕೇಂದ್ರ ಸಂಸ್ಥೆ ದಾಳಿ ನಡೆಸುತ್ತಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಮತ್ತು ಮಿಶ್ರಾ ಅವರ ಸಹವರ್ತಿ ಬಚ್ಚು ಯಾದವ್ನನ್ನು ಪ್ರಶ್ನಿಸಿದ ನಂತರ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಇತರ ರಾಜ್ಯಗಳಲ್ಲಿ ಎನ್‌ಐಎ ದಾಳಿ: ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಹೆರಾಯಿನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ನವದೆಹಲಿ, ಮುಜಾಫರ್‌ನಗರ (ಉತ್ತರ ಪ್ರದೇಶ), ತೆಹ್ರಿ (ಉತ್ತರಾಖಂಡ) ಮತ್ತು ರಾಜಸ್ಥಾನದ ಜೈಪುರದ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಿತ್ತು.
ಏಪ್ರಿಲ್ 24 ರಂದು ಅಟ್ಟಾರಿಯಲ್ಲಿ ಅಫ್ಘಾನಿಸ್ತಾನ ಮೂಲದ ಸಾಗರೋತ್ತರ ಪೂರೈಕೆದಾರರು ಕಳುಹಿಸಿದ ಲೈಕೋರೈಸ್ ಬೇರುಗಳ (ಮುಲೇತಿ) ರವಾನೆಯಲ್ಲಿ ಹೆರಾಯಿನ್ ಅನ್ನು ಮರೆಮಾಡಲಾಗಿತ್ತು. ಆರಂಭದಲ್ಲಿ ಅಮೃತಸರದ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಈ ಪ್ರಕರಣವನ್ನು ದಾಖಲಿಸಿದ್ದರು. ನಂತರ ಎನ್‌ಐಎ ಜುಲೈನಲ್ಲಿ ಪ್ರಕರಣವನ್ನು ದಾಖಲಿಸಿತು. ಬುಧವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳು ಸೇರಿದಂತೆ ದೋಷಾರೋಪಣೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಓದಿ: ಜಾರ್ಖಂಡ್ ಸಿಎಂ ಆಪ್ತನ ನಿವಾಸದ ಮೇಲೆ ಇಡಿ ದಾಳಿ: ಎರಡು AK 47 ರೈಫಲ್ ವಶಕ್ಕೆ