ನವದೆಹಲಿ: ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಮೇ 24 ರಿಂದ 29 ರವರೆಗೆ ಒಟ್ಟು 25 ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೂರ್ವ ವಲಯ ರೈಲ್ವೆ ತಿಳಿಸಿದೆ. ಈ ಬಗ್ಗೆ ರೈಲ್ವೆ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಸ್ಥಗಿತಗೊಳ್ಳಲಿರುವ ರೈಲುಗಳ ಮಾಹಿತಿಯನ್ನು ನೀಡಿದೆ.
ಗುವಾಹಟಿ- ಬೆಂಗಳೂರು, ಮುಝಫ್ಪರ್ಪುರ್- ಯಶವಂತಪುರ, ಎರ್ನಾಕುಲಂ-ಪಾಟ್ನಾ, ನ್ಯೂ ಟಿನ್ಸುಕಿಯಾ -ತಂಬರಂ, ಭಾಗಲ್ಪುರ್- ಯಶವಂತಪುರ ಸೇರಿದಂತೆ ಇತರ ರೈಲುಗಳ ಓಡಾಟ ಸ್ಥಗಿತಗೊಳ್ಳಲಿದೆ
ಯಾಸ್ ಚಂಡಮಾರುತದಿಂದ ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಒತ್ತಡದಿಂದ ತೀರ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ ಅಂದಾಜು 155 ರಿಂದ 165 ಕಿ.ಮೀ ವೇಗದಲ್ಲಿ ಬೀಸುವ ಚಂಡಮಾರುತವು, ಮೇ 26 ರ ಸಂಜೆ ಒಡಿಶಾದ ಪ್ಯಾರಾಡಿಪ್ ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪದ ನಡುವೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಡಾ. ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು
ಯಾಸ್ ಚಂಡಮಾರುತ ತೌಕ್ತೆ ಮತ್ತು ಆಂಫಾನ್ ಚಂಡುಮಾರುತಗಳಂತೆ ಬೀಸಲಿದ್ದು, ತೀರ ಪ್ರದೇಶಗಳಲ್ಲಿ ಭಾರೀ ಹಾನಿ ಉಂಟು ಮಾಡಲಿದೆ ಎಂದು ಮೋಹಪಾತ್ರ ಮುನ್ನೆಚ್ಚರಿಕೆ ನೀಡಿದ್ದಾರೆ.
ಈ ನಡುವೆ ಭಾನುವಾರ ಕೇಂದ್ರ, ರಾಜ್ಯ ಸಚಿವರ ಮತ್ತು ಇತರ ಇಲಾಖೆಗಳ ಪ್ರಮುಖರ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದರು.