ನವದೆಹಲಿ: ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಜೋಡಿ ಮೇಲೆ ದುಷ್ಕರ್ಮಿಗಳ ಗುಂಪುವೊಂದು ಗುಂಡಿನ ದಾಳಿ ನಡೆಸಿದ್ದು, ಅದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ದ್ವಾರಕಾ ಜಿಲ್ಲೆಯ ಅಮ್ರಾಯಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇದೀಗ ವಿಡಿಯೋ ಆಧಾರದ ಮೇಲೆ ಆರೋಪಿಗಳ ಪತ್ತೆಗೋಸ್ಕರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಯುವಕ ವಿನಯ್ ಸಾವನ್ನಪ್ಪಿದ್ದು, ಹುಡುಗಿ ಸ್ಥಿತಿ ಗಂಭೀರವಾಗಿದೆ. ದ್ವಾರಕಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿರಿ: ತುರ್ತುಪರಿಸ್ಥಿತಿ ಹೇರಿದ 'ಕರಾಳ ದಿನ'ವನ್ನು ಎಂದಿಗೂ ಮರೆಯಲು ಅಸಾಧ್ಯ : ಪ್ರಧಾನಿ ಮೋದಿ
ಜೋಡಿ ಸೋನಿಪತ್ನವರೆಂದು ಹೇಳಲಾಗುತ್ತಿದ್ದು, ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಕಳೆದ ವರ್ಷ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಘಟನೆಯಲ್ಲಿ ಸಾವನ್ನಪ್ಪಿರುವ ವಿನಯ್ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ದ್ವಾರಕಾ ಸೆಕ್ಟರ್-23ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಜೋಡಿ ಒಂದೇ ಗ್ರಾಮದವರಾಗಿದ್ದು, ಕಳೆದ ವರ್ಷ ಇವರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದರು. ತದನಂತರ ದೆಹಲಿಯ ಅಮ್ರಾಯಿ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದರು. ಬಳಿಕ ತಮ್ಮ ಕುಟುಂಬದೊಂದಿಗೆ ಯಾವುದೇ ರೀತಿಯ ಸಂಪರ್ಕ ಸಾಧಿಸಿರಲಿಲ್ಲ ಎಂದು ತಿಳಿದು ಬಂದಿದೆ.