ಗುವಾಹಟಿ (ಅಸ್ಸೋಂ) : ಗುವಾಹಟಿ ಕ್ರಮೇಣ ಡ್ರಗ್ಸ್ ಟ್ರಾಫಿಕಿಂಗ್ ಕಾರಿಡಾರ್ ಆಗಿ ಮಾರ್ಪಟ್ಟಿದೆ. ಉತ್ತರ ಗುವಾಹಟಿಯ ಭೇತಮುಖ ನಯನಪಾರಾದಲ್ಲಿ ಮಂಗಳವಾರ ನಗರ ಪೊಲೀಸರು ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಸುಮಾರು 15 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಕಾರ್ಯಾಚರಣೆಯ ಸಮಯದಲ್ಲಿ ತಪ್ಪಿಸಿಕೊಳ್ಳಲು ಮುಂದಾದ ಮಾದಕವಸ್ತು ಕಳ್ಳಸಾಗಣೆದಾರರನ್ನು ಹಿಡಿಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರನ್ನು ಬಂಧಿಸಿದ್ದಾರೆ.
ಉತ್ತರ ಗುವಾಹಟಿಯ ಭೇತಮುಖದಲ್ಲಿ ಇಂದು ಬೆಳಗ್ಗೆ ಡಿಐಜಿ ಪಾರ್ಥ ಸಾರಥಿ ಮಹಾಂತ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಕಾಮರೂಪ್, ಕಲ್ಯಾಣ್ ಪಾಠಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಡ್ರಗ್ ದಂಧೆಕೋರರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಅಕ್ರಮ ದಂಧೆಯಲ್ಲಿ ತೊಡಗಿರುವ ಆರೋಪದ ಮೇಲೆ ಕ್ರಮವಾಗಿ ಇಬ್ಬರು ಡ್ರಗ್ ಪೆಡ್ಲರ್‌ಗಳಾದ ಸೋನು ಅಲಿ ಮತ್ತು ಅರ್ಜುನ್ ಬಾಸ್ಫರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಪೂರೈಕೆದಾರರು ಗುವಾಹಟಿಯ ಗರಿಗಾಂವ್ ಪ್ರದೇಶದವರು ಎಂಬುದಾಗಿ ತಿಳಿದು ಬಂದಿದೆ. ನೆರೆಯ ರಾಜ್ಯ ಮಣಿಪುರದಿಂದ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮನೆಯಲ್ಲಿ ಮಿನಿ ಡ್ರಗ್ಸ್ ಫ್ಯಾಕ್ಟರಿ! ನೈಜೀರಿಯಾ ವ್ಯಕ್ತಿ ಬಂಧನ
ನೈಜೀರಿಯಾ ವ್ಯಕ್ತಿ ಬಂಧನ (ಪ್ರತ್ಯೇಕ ಘಟನೆ): ಅಡುಗೆ ಮಾಡುವ ಪ್ರೆಷರ್ ಕುಕ್ಕರ್ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ ದೇಶ, ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು (ನವೆಂಬರ್ 10-2023) ಬಂಧಿಸಿದ್ದರು. ನೈಜೀರಿಯಾ ಮೂಲದ ಬೆಂಜಮಿನ್ ಬಂಧಿತ ಆರೋಪಿ. ಈತನಿಂದ ₹10 ಕೋಟಿ ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಮತ್ತು ರಾಸಾಯನಿಕ ಆಮ್ಲ ಸೇರಿದಂತೆ ಮತ್ತಿತರ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿತ್ತು.
ಆರೋಪಿ ಅವಲಹಳ್ಳಿಯ ತನ್ನ ಮನೆಯಲ್ಲಿಯೇ ಕಚ್ಚಾ ಪದಾರ್ಥಗಳನ್ನು ಬಳಸಿ ಪ್ರೆಷರ್ ಕುಕ್ಕರ್ನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಸುತ್ತಿದ್ದ. ನಂತರ ಅವುಗಳನ್ನು ರಾಜ್ಯ, ಅನ್ಯರಾಜ್ಯ ಸೇರಿದಂತೆ ವಿದೇಶಗಳ ಗಿರಾಕಿಗಳು ಹಾಗೂ ಮಾದಕ ಸರಬರಾಜುಗಾರರಿಗೆ ಮಾರಾಟ ಮಾಡುತ್ತಿದ್ದ. ಆರಂಭದಲ್ಲಿ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಈತನನ್ನು 100 ಗ್ರಾಂ ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಆದರೆ, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅವಲಹಳ್ಳಿಯ ತನ್ನ ಮನೆಯಲ್ಲಿಯೇ ಸಣ್ಣ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವ ವಿಚಾರ ಬಯಲಾಗಿತ್ತು.