ಅಗರ್ತಲಾ (ತ್ರಿಪುರಾ): ರಾಜ್ಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ 7,999 ಕೆ.ಜಿ (ಅಂದಾಜು 8 ಟನ್) ಗಾಂಜಾ ಮತ್ತು 4.2 ಕೋಟಿ ರೂಪಾಯಿ ಮೌಲ್ಯದ 49,860ಕ್ಕೂ ಹೆಚ್ಚು ವ್ಯಸನಕಾರಿ ಯಾಬಾ ಮಾತ್ರೆಗಳನ್ನು ಪೊಲೀಸರು ಶನಿವಾರ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಪಶ್ಚಿಮ ತ್ರಿಪುರಾದ ರಾಧಾಕಿಶೋರ್ ನಗರದಲ್ಲಿ ಐಜಿಪಿ ಆರ್.ಗೋಪಾಲ ಕೃಷ್ಣರಾವ್ ನೇತೃತ್ವದ ಉನ್ನತ ಮಟ್ಟದ ಡ್ರಗ್ ವಿಲೇವಾರಿ ಸಮಿತಿಯು ಇದನ್ನು ನಾಶಪಡಿಸಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪೊಲೀಸರು ಅಪಾರ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಒಂದು ವಾರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ತ್ರಿಪುರಾ ಪೊಲೀಸರು ಸುಮಾರು 11 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು.
ಇದನ್ನೂ ಓದಿ: ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ: ಆನೇಕಲ್‌ನಲ್ಲಿ ಇಬ್ಬರ ಬಂಧನ
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಅಧಿಕಾರಿಗಳು ಮಾದಕವಸ್ತು ಮಾರಾಟದ ವಿರುದ್ಧ ಸಮರ ಸಾರಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಈ ಬೆನ್ನಲ್ಲೆ 856 ಕಿ.ಮೀ ಅಂತರದ ತ್ರಿಪುರಾ ಮತ್ತು ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಅರೆ-ಮಿಲಿಟರಿ ಪಡೆಗಳು ಕಳ್ಳಸಾಗಣೆ ತಡೆಯಲು ಕ್ಷಿಪ್ರ ಕಾರ್ಯಾಚರಣೆ ಶುರು ಮಾಡಿವೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗಾಂಜಾ ಪ್ರಕರಣ: ಮತ್ತೆ ಇಬ್ಬರು ವೈದ್ಯರು ಸೇರಿದಂತೆ 9 ಮಂದಿ ಬಂಧನ.. ಬಂಧಿತರ ಸಂಖ್ಯೆ 24 ಕ್ಕೆ ಏರಿಕೆ!
ಬೀದರ್ನಲ್ಲೂ ಗಾಂಜಾ ನಾಶ: ಕಳೆದ ವರ್ಷದ ಡಿಸೆಂಬರ್ 30 ರಂದು ಬೀದರ್ ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಗಾಂಜಾ ಬೆಳೆದು ಸಾಗಾಣೆ ಮತ್ತು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದ ಮಾದಕ ವಸ್ತುವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿ ನಿಯಮಾನುಸಾರ ನಾಶಗೊಳಿಸಿತ್ತು. ಧನ್ನೂರ ಗ್ರಾಮದಲ್ಲಿರುವ ಇನ್ವೆರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ 998 ಕೆಜಿ ಗಾಂಜಾ ನಾಶಪಡಿಸಲಾಗಿತ್ತು.
ಇದನ್ನೂ ಓದಿ: ಮಂಗಳೂರು ಗಾಂಜಾ ಪ್ರಕರಣ: ವೈದ್ಯ ಸೇರಿ ಮತ್ತಿಬ್ಬರು ಅರೆಸ್ಟ್, ಬಂಧಿತರ ಸಂಖ್ಯೆ 15ಕ್ಕೇರಿಕೆ
ನೆರೆಯ ಆಂಧ್ರ ಪ್ರದೇಶದಿಂದ ಮಾದಕವಸ್ತು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಡಿ.ಜೆ ಹಳ್ಳಿ ಠಾಣಾ ಪೊಲೀಸರು ಕಳೆದ ಮಾರ್ಚ್ ತಿಂಗಳ ಆರಂಭದಲ್ಲಿ ಬಂಧಿಸಿದ್ದಾರೆ. ನವಾಜ್ ಖಾನ್ ಹಾಗೂ ಅಬ್ದುಲ್ ರೆಹಮಾನ್ ಬಂಧಿತರು. ಇವರಿಂದ 2.47 ಕೋಟಿ ಮೌಲ್ಯದ 415 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳಿಬ್ಬರು ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಫೈರೋಜ್ ಖಾನ್ ಹಾಗೂ ಪ್ರಸಾದ್ ಎಂಬವರಿಂದ ಗಾಂಜಾ ಖರೀದಿಸುತ್ತಿದ್ದರು. ಆ ಬಳಿಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿತ್ತು.
ಇದನ್ನೂ ಓದಿ: ಗಾಂಜಾ ಸೇವನೆ ಮತ್ತು ಮಾರಾಟ.. ಇಬ್ಬರು ವೈದ್ಯರು, ಮಹಿಳಾ ಮೆಡಿಕಲ್ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್