ಹೈದರಾಬಾದ್: 2017ರ ಡ್ರಗ್ಸ್ ಪ್ರಕರಣ ಸಂಬಂಧ ಹಣ ವರ್ಗಾವಣೆಯ ತನಿಖೆ ಭಾಗವಾಗಿ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಇಂದು ಹೈದರಾಬಾದ್ನಲ್ಲಿರುವ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಟಾಲಿವುಡ್ನಲ್ಲೂ ಸಂಚಲನ ಮೂಡಿಸಿದ್ದ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಭರದಿಂದ ಸಾಗುತ್ತಿದೆ. ಸಾಕ್ಷಿ ಕಲೆ ಹಾಕುವ ಸಲುವಾಗಿ ನಟಿ ರಕುಲ್ ಪ್ರೀತ್ ಅವರನ್ನು ಇಡಿ ಕರೆಸಿಕೊಂಡಿದೆ. ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 10 ಕ್ಕೂ ಹೆಚ್ಚು ತೆಲುಗು ಚಿತ್ರದ ಕಲಾವಿದರನ್ನು ಕರೆಸಿ ವಿಚಾರಣೆ ನಡೆಸಿತ್ತು.
ಈ ಪ್ರಕರಣದಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯವು ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಕೌರ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. 2017ರ ಜುಲೈ ತಿಂಗಳಿನಲ್ಲಿ ಡ್ರಗ್ಸ್ ಪ್ರಕರಣ ಬಹಿರಂಗವಾಗಿತ್ತು. ಮಾತ್ರವಲ್ಲದೇ ಡ್ರಗ್ ಕಳ್ಳ ಸಾಗಣೆ ಸಂಬಂಧ ಹಲವಾರು ಪ್ರಕರಣಗಳು ದಾಖಲಾಗಿದ್ದು, 20 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು.
ತೆಲಂಗಾಣದ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನಿಖೆಯ ಭಾಗವಾಗಿ ಟಾಲಿವುಡ್‌ನೊಂದಿಗಿನ ಮಾದಕವಸ್ತು ಸಂಪರ್ಕದ ಬಗ್ಗೆಯೂ ತನಿಖೆ ನಡೆಸಿತ್ತು. ನಂತರ ಚಾಲಕರನ್ನು ಹೊರತುಪಡಿಸಿ ನಟರು ಮತ್ತು ನಿರ್ದೇಶಕರು ಸೇರಿದಂತೆ ತೆಲುಗು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ 11 ಜನರನ್ನು ವಿಚಾರಣೆಗೆ ಒಳಪಡಿಸಿತು. ನಟನೊಬ್ಬನ ಕೂದಲು ಮತ್ತು ಉಗುರಿನ ಮಾದರಿಗಳನ್ನು ಕೂಡ ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ.
ಕಳೆದ ವರ್ಷ, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ತನಿಖೆಯಲ್ಲಿ ರಕುಲ್ ಪ್ರೀತ್ ಸಿಂಗ್ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಪ್ರಶ್ನಿಸಿತ್ತು. 2015-17 ನೇ ಸಾಲಿನ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ನಟಿ ಚಾರ್ಮಿ ಕೌರ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಕರೆಸಿ ವಿಚಾರಣೆ ನಡೆಸಿತ್ತು. ಸುಮಾರು 8 ಗಂಟೆಗಳ ಕಾಲ ನಟಿ ವಿಚಾರಣೆ ಎದುರಿಸಿದರು. ಆಗಸ್ಟ್ 31ರಂದು ನಿರ್ದೇಶಕ ಪುರಿ ಜಗನ್ನಾಥ್ ಅವರ ವಿಚಾರಣೆ ನಡೆದಿತ್ತು.