ಜಮ್ಶೆಡ್ಪುರ: ಸಾವು ಯಾವ ರೂಪದಲ್ಲಿ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗಲ್ಲ. ಸಾವು ಬಂದಾಗ ನಮ್ಮ ಜೀವನವೂ ಅಲ್ಲಿಗೆ ಮುಕ್ತಾಯವಾಗುತ್ತೆ. ಇಂತಹದೊಂದು ಘಟನೆ ಸೋನಾರಿಯಲ್ಲಿ ಸಂಭವಿಸಿದೆ.
ಹೌದು, ಚಲಿಸುವ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದಾನೆ. ಮಂಗಳವಾರ ತಡರಾತ್ರಿ ಸೋನಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನೋಡು-ನೋಡುತ್ತಿದ್ದಂತೆ ಬೆಂಕಿ ಇಡೀ ವಾಹನಕ್ಕೆ ಆವರಿಸಿತು. ಅದರಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನಲ್ಲಿಯೇ ಸಿಲುಕಿಕೊಂಡಿದ್ದನು.
ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿ ರಕ್ಷಾಣ ಕಾರ್ಯಕ್ಕೆ ಮುಂದಾದರು. ಸ್ಥಳೀಯರು ತಮ್ಮ ಪ್ರಯತ್ನದಿಂದ ಬೆಂಕಿಯನ್ನು ನಂದಿಸಿದ್ರೂ ಪ್ರಯೋಜನವಾಗಲಿಲ್ಲ. ವ್ಯಕ್ತಿ ಕಾರಿನಿಂದ ಹೊರಬರಲು ಸಾಧ್ಯವಾಗದೇ ಅಲ್ಲೇ ಸುಟ್ಟು ಕರಕಲವಾಗಿದ್ದಾನೆ. ಬೆಂಕಿ ನಂದಿಸಿದ ನಂತರ ಚಾಲಕನನ್ನು ಕಾರಿನಿಂದ ಹೊರ ತೆಗೆದರು.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದರು. ಮೃತ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗದಷ್ಟು ದೇಹ ಸುಟ್ಟು ಕರಕಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಎಂಜಿಎಂ ಆಸ್ಪತ್ರೆಗೆ ರವಾನಿಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.