ಹೈದರಾಬಾದ್: ಚಾಲಕನೊಬ್ಬ ಬರೋಬ್ಬರಿ 7 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ಹೈದರಾಬಾದ್‌ನ ಎಸ್‌ಆರ್ ನಗರದಲ್ಲಿ ನಿನ್ನೆ(ಶುಕ್ರವಾರ) ಸಂಜೆ ನಡೆದಿದೆ. ಶ್ರೀನಿವಾಸ್ ಚಿನ್ನಾಭರಣಗಳೊಂದಿಗೆ ಪರಾರಿಯಾದ ಕಾರು ಚಾಲಕ. ಮೂಲಗಳ ಪ್ರಕಾರ ಮಾದಾಪುರ ನಿವಾಸಿ ರಾಧಿಕಾ ಎಂಬುವವರು ಚಿನ್ನಾಭರಣ ವ್ಯಾಪಾರ ಮಾಡುತ್ತಾರೆ. ವಜ್ರ ಮತ್ತು ಚಿನ್ನದ ಆಭರಣಗಳನ್ನು ಪ್ರಮುಖ ಆಭರಣ ಮಳಿಗೆಗಳಿಂದ ಖರೀದಿಸಿ ಗ್ರಾಹಕರಿಗೆ ಪೂರೈಸುತ್ತಿದ್ದರು. ಈಕೆಯೊಂದಿಗೆ ಶ್ರೀನಿವಾಸ್ ಎಂಬ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವಿಶ್ವಾಸದಿಂದ ರಾಧಿಕಾ ಕೆಲವೊಮ್ಮೆ ಗ್ರಾಹಕರ ಆರ್ಡರ್‌ಗಳನ್ನು ತಲುಪಿಸಲು ಈತನನ್ನೇ ಕಳುಹಿಸುತ್ತಿದ್ದರು.
ಆದರೆ, ಚಿನ್ನಾಭರಣಗಳ ಮೇಲೆ ಕಣ್ಣಿಟ್ಟ ಶ್ರೀನಿವಾಸ್, ಆಭರಣಗಳನ್ನು ಕದಿಯಲು ಯೋಜನೆ ರೂಪಿಸಿ, ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಅಂದುಕೊಂಡಂತೆ ಶುಕ್ರವಾರ ರಾಧಿಕಾ ಇರುವ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿರುವ ಅನುಷಾ ಎಂಬ ಮಹಿಳೆ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಆರ್ಡರ್ ಮಾಡಿದ್ದರು. ಆದರೆ, ಅನುಷಾ ಮನೆಯಲ್ಲಿ ಇರಲಿಲ್ಲ. ಮಧುರಾ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಳು. ಆಭರಣವನ್ನು ಅಲ್ಲಿಗೆ ಕಳುಹಿಸುವಂತೆ ರಾಧಿಕಾಳಿಗೆ ತಿಳಿಸಿದ್ದಳು. ಹಾಗಾಗಿ ರಾಧಿಕಾ ಅವರು ಚಾಲಕ ಶ್ರೀನಿವಾಸ್ ಮತ್ತು ಸೇಲ್ಸ್ ಮ್ಯಾನ್ ಅಕ್ಷಯ್ ಅವರೊಂದಿಗೆ 7 ಕೋಟಿ ಮೌಲ್ಯದ ವಜ್ರಾಭರಣಗಳನ್ನು ಕಳುಹಿಸಿದ್ದಾರೆ. ಅನುಷಾ ಅವರ 50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತಲುಪಿಸಿದ ನಂತರ ಉಳಿದ ಆಭರಣಗಳನ್ನು ಸಿರಿ ಗಿರಿರಾಜ್ ಜೆಮ್ಸ್ ಮತ್ತು ಜ್ಯುವೆಲ್ಲರ್ಸ್‌ಗೆ ಹಿಂತಿರುಗಿಸಬೇಕಿತ್ತು.
7 ಕೋಟಿ ರೂ. ಮೌಲ್ಯದ ಚಿನ್ನಾಭರಣ: ಮಧುರಾ ನಗರದಲ್ಲಿರುವ ಅನುಷಾ ಅವರ ಸಂಬಂಧಿಕರ ಮನೆ ತಲುಪಿದ ನಂತರ ಚಾಲಕ ಶ್ರೀನಿವಾಸ್ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾನೆ. ಯೋಜನೆಯಂತೆ ಆರ್ಡರ್ ಕೊಡಲು ಅಕ್ಷಯ್ ನನ್ನು ಮನೆಯೊಳಗೆ ಕಳುಹಿಸಿದ್ದಾನೆ. ಅಕ್ಷಯ್ ಚಿನ್ನಾಭರಣವನ್ನು ಗ್ರಾಹಕರಿಗೆ ನೀಡುತ್ತಿದ್ದ. ಆಗ ಕಾರಿನಲ್ಲಿ ಕಾಯುತ್ತಿದ್ದ ಚಾಲಕ ಶ್ರೀನಿವಾಸ್ 7 ಕೋಟಿ ಮೌಲ್ಯದ ಉಳಿದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಸೇಲ್ಸ್ ಮ್ಯಾನ್ ಅಕ್ಷಯ್ ಕೂಡಲೇ ಈ ವಿಚಾರವನ್ನು ರಾಧಿಕಾ ಅವರಿಗೆ ತಿಳಿಸಿದ್ದಾನೆ. ವಿಷಯ ತಿಳಿದು ಕೂಡಲೇ ರಾಧಿಕಾ ಎಸ್ ಆರ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಚಾಲಕ ಕೊಂಡೊಯ್ದ ಚಿನ್ನಾಭರಣಗಳ ಮೌಲ್ಯ ಸುಮಾರು 7 ಕೋಟಿ ರೂಪಾಯಿ ಎಂದು ರಾಧಿಕಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಿನ್ನ ದೋಚಿ ಪರಾರಿ: ಮುಂಬೈನ ಝವೇರಿ ಬಜಾರ್ ಪ್ರದೇಶದಲ್ಲಿನ ಉದ್ಯಮಿಯೊಬ್ಬರ ಕಚೇರಿ ಮೇಲೆ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ದಾಳಿ ನಡೆಸಿದ ದುಷ್ಕರ್ಮಿಗಳು 2 ಕೋಟಿ ರೂಪಾಯಿ ಲೂಟಿ ಮಾಡಿರುವ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಝವೇರಿ ಬಜಾರ್‌ನಲ್ಲಿರುವ ಉದ್ಯಮಿಯೊಬ್ಬರ ಕಚೇರಿ ಮೇಲೆ ಇಡಿ ಅಧಿಕಾರಿಗಳಂತೆ ಬಿಂಬಿಸಿಕೊಂಡ ನಾಲ್ವರು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಲೋಕಮಾನ್ಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ 4 ಅಪರಿಚಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 394, 506 (2) ಮತ್ತು 120 ಬಿ ಅಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ನಕಲಿ ಇಡಿ ಅಧಿಕಾರಿಗಳಿಂದ ದಾಳಿ: 25 ಲಕ್ಷ ನಗದು, 3 ಕೆಜಿ ಚಿನ್ನ ದೋಚಿ ಪರಾರಿ!