ಲಖನೌ : ಲಖನೌದ ಐತಿಹಾಸಿಕ ಬಡಾ ಇಮಾಂಬರಾ, ಶಾರ್ಟ್ಸ್ ಧರಿಸಿರುವ ಮತ್ತು ತಲೆಗವಸು ಇಲ್ಲದ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆದ ಒಂದು ದಿನದ ನಂತರ ಈ ಕಠಿಣ ನಿಯಮ ಜಾರಿಗೆ ತರಲಾಗಿದೆ.
ಈ ವಿಡಿಯೋದಲ್ಲಿ ಇಮಾಂಬರಾ ಆವರಣದಲ್ಲಿ ಹುಡುಗಿಯೊಬ್ಬಳು ನೃತ್ಯ ಮಾಡಿದ್ದಾಳೆ. ಈ ಕಾರಣದಿಂದಾಗಿ ಐತಿಹಾಸಿಕ ಸ್ಮಾರಕಗಳನ್ನು ನೋಡಿಕೊಳ್ಳುವ ಹುಸೈನಬಾದ್ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. ಶಿಯಾ ಧರ್ಮಗುರುಗಳು ಈ ಘಟನೆಯನ್ನು ಕಟುವಾಗಿ ಟೀಕಿಸಿದ್ದಾರೆ ಮತ್ತು ಪ್ರವಾಸಿಗರಿಗೆ ಕಠಿಣ ನಿಯಮಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ.
ಮುಖ್ಯವಾಗಿ ಶಿಯಾ ಮುಸ್ಲಿಮರು ಮೊಹರಂ ಸಮಯದಲ್ಲಿ ಆಚರಣೆ ನಡೆಸಲು ಇಲ್ಲಿಗೆ ಬರುತ್ತಾರೆ. ಇದು ಗಂಭೀರ ವಿಷಯವಾಗಿದೆ. ತನಿಖೆ ನಡೆಸಬೇಕು ಮತ್ತು ಆ ಹುಡುಗಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಮಾಂಬರ ಕೇವಲ ಪ್ರವಾಸಿ ಸ್ಥಳವಲ್ಲ. ಇದು ಧಾರ್ಮಿಕ ಸ್ಥಳವಾಗಿದೆ ಮತ್ತು ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಶಿಯಾ ಧರ್ಮಗುರು ಮೌಲಾನಾ ಸೈಫ್ ಅಬ್ಬಾಸ್ ಹೇಳಿದ್ದಾರೆ.

ಮಹಿಳಾ ಪ್ರವಾಸಿಗರಿಗೆ ತಲೆಗವಸು ವಿತರಿಸಲು ಟ್ರಸ್ಟ್ ಸ್ವಯಂಸೇವಕರನ್ನು ಇಮಾಂಬರದಲ್ಲಿ ನಿಯೋಜಿಸಿದೆ. ನಾವು ಹುಡುಗಿಯರನ್ನು ಚಿಕ್ಕ ಬಟ್ಟೆಯಲ್ಲಿ ಅಥವಾ ಮಿನಿ ಸ್ಕರ್ಟ್‌ಗಳಲ್ಲಿ ಅನುಮತಿಸುವುದಿಲ್ಲ ಎಂದು ಕಚೇರಿಯ ಸಿಬ್ಬಂದಿಯೊಬ್ಬರು ಎಚ್ಚರಿಸಿದ್ದಾರೆ.
ಸ್ಮಾರಕವನ್ನು 1784ರಲ್ಲಿ ಅವಧ್ ಅಸಫ್-ಉದ್-ದೌಲಾದ 4ನೇ ನವಾಬನು ಪ್ರಮುಖ ಕ್ಷಾಮ ಪರಿಹಾರ ಯೋಜನೆಯಾಗಿ ನಿರ್ಮಿಸಿದ್ದನು. ಇದರ ಕೇಂದ್ರ ಸಭಾಂಗಣವು ತುಂಬಾ ವಿಶಿಷ್ಟವಾಗಿದೆ. ಇದಕ್ಕೆ ಯಾವುದೇ ಆಧಾರವಿಲ್ಲದಂತೆ ನಿರ್ಮಾಣ ಮಾಡಲಾಗಿದೆ. ಹಾಗೆ ವಿಶ್ವದ ಅತಿದೊಡ್ಡ ಕಮಾನಿನ ಸಭಾಂಗಣಗಳಲ್ಲಿ ಇದೂ ಒಂದಾಗಿದೆ.