ಉಸ್ಮಾನಾಬಾದ್ (ಮಹಾರಾಷ್ಟ್ರ) : ಜಿಲ್ಲೆಯ ತುಳಜಾ ಭವಾನಿ ದೇವಸ್ಥಾನದಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನು ನಿಷೇಧಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ. ಸಡಿಲವಾದ ಬಟ್ಟೆಗಳನ್ನು ಧರಿಸಿ ದೇವಿಯ ದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಅರಿವನ್ನು ಕಾಪಾಡಿಕೊಳ್ಳಲು ಆಡಳಿತ ಮಂಡಳಿ ಮನವಿ ಮಾಡಿದೆ.
ಇಂದಿನಿಂದ ದೇವಸ್ಥಾನದಲ್ಲಿ ಅಸಭ್ಯ ಬಟ್ಟೆ ಧರಿಸಿ ಬರುವವರಿಗೆ ದೇಗುಲ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಲಾಗಿದೆ. ಅಕ್ಟೋಬರ್ 2018 ರಲ್ಲಿ ನವರಾತ್ರಿ ಸಂದರ್ಭದಲ್ಲಿ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನದ ಬಗ್ಗೆ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶಿರಸಿಯಲ್ಲೂ ಇಂತಹ ಫಲಕಗಳನ್ನು ಅಳವಡಿಸಲಾಗಿತ್ತು. ಆದರೆ ಸಾರ್ವಜನಿಕರ ವಿರೋಧದ ನಂತರ ಈ ಬೋರ್ಡ್‌ಗಳನ್ನು ತೆಗೆದುಹಾಕಲಾಯಿತು.
ಇದನ್ನೂ ಓದಿ : ನಿಶ್ಚಿತಾರ್ಥದ ಕಾರ್ಯಕ್ರಮದ ವೇಳೆ ತಂದೆ ಕಣ್ಣೀರು ಒರೆಸಿಕೊಳ್ಳುತ್ತಿರುವ ಚಿತ್ರ ಹಂಚಿಕೊಂಡ ಪರಿಣಿತಿ ಚೋಪ್ರಾ..
ಇದೀಗ ತುಳಜಾಭವಾನಿ ದೇವಸ್ಥಾನದ ಆಡಳಿತ ಮಂಡಳಿ ಇಂತಹ ನಿರ್ಧಾರ ಕೈಗೊಂಡಿದೆ. ಆದ್ದರಿಂದ, ಹೊಸ ವಿವಾದ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಬಾಲಘಾಟ್ ಪರ್ವತದ ಮೇಲೆ ನೆಲೆಗೊಂಡಿರುವ ತುಳಜಾಭವಾನಿ ದೇವಸ್ಥಾನವು ಮಹಾರಾಷ್ಟ್ರದ ಶಕ್ತಿಪೀಠದ ದೇವಾಲಯವಾಗಿದೆ. ಈ ದೇವಾಲಯವು ರಾಷ್ಟ್ರಕೂಟರ ಕಾಲದ್ದು ಎಂದು ಹೇಳಲಾಗುತ್ತದೆ.
ಇದೀಗಾ ಇಂತಹ ಪವಿತ್ರ ಶಕ್ತಿ ಪೀಠ ಪ್ರವೇಶಕ್ಕೆ ದೇವಸ್ಥಾನದ ಅಧಿಕಾರಿಗಳು ನಿಯಮಾವಳಿ ಹೊರಡಿಸಿದ್ದಾರೆ. ಬರ್ಮುಡಾ ಶಾರ್ಟ್ಸ್, ಹಾಫ್ ಪ್ಯಾಂಟ್, ಪ್ರಚೋದನಕಾರಿ ಬಟ್ಟೆ ಮತ್ತು ಬಹಿರಂಗ ಬಟ್ಟೆಗಳನ್ನು ಧರಿಸಿರುವ ಭಕ್ತರನ್ನು ದೇವಾಲಯದ ಒಳಗೆ ಅನುಮತಿಸಲಾಗುವುದಿಲ್ಲ. ಮಹಿಳೆಯರು ಒನ್ ಪೀಸ್, ಶಾರ್ಟ್ ಸ್ಕರ್ಟ್, ಶಾರ್ಟ್ ಪ್ಯಾಂಟ್ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ. ಪುರುಷರು ಕೂಡ ಚಿಕ್ಕ ಪ್ಯಾಂಟ್ ಧರಿಸುವಂತಿಲ್ಲ ಎಂದು ವಿಷಯ ಫಲಕ ಹಾಕಲಾಗಿದೆ.
ಇದನ್ನೂ ಓದಿ : ದಿ ಕೇರಳ ಸ್ಟೋರಿ ಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರದ ನಿಷೇಧ ಆದೇಶಕ್ಕೆ ಸುಪ್ರೀಂ ತಡೆ
ಇತ್ತೀಚಿನ ದಿನಗಳಲ್ಲಿ ಪೀಠಕ್ಕೆ ಬರುವ ಭಕ್ತರ ಜನಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ಅಗತ್ಯತೆ ವ್ಯಕ್ತವಾಗುತ್ತಿದೆ. 2014ರಲ್ಲಿ ತುಳಜಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಗುಲದ ಅಭಿವೃದ್ಧಿಗೆ ಭರವಸೆ ನೀಡಿದ್ದರು. ಒಂಬತ್ತು ವರ್ಷಗಳ ನಂತರ ಈ ನಿಟ್ಟಿನಲ್ಲಿ ಈ ತರಹದ ಹೊಸ ಪ್ರಯತ್ನಗಳು ನಡೆಯುತ್ತಿವೆ. ಟೆಂಪಲ್ ಇನ್‌ಸ್ಟಿಟ್ಯೂಟ್‌ನ ಹೊಸ ಅಭಿವೃದ್ಧಿ ಯೋಜನೆಗೆ 'ಪ್ರಸಾದ್ ಯೋಜನೆ' ಮೂಲಕ ಹಣ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.
ಚಾಮುಂಡಿ ಬೆಟ್ಟದಲ್ಲೂ ಡ್ರೆಸ್ ಕೋಡ್ ಅಭಿಯಾನ : ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಅಭಿಯಾನವನ್ನು ಮೈಸೂರಿನಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಸಿದರು. ಈ ವೇಳೆ, ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ, ಈ ಅಭಿಯಾನಕ್ಕೆ ನನ್ನ ಬೆಂಬಲವಿದೆ. ಅಲ್ಲದೇ ಈ ವಿಷಯವನ್ನು ಸಾರ್ವಜನಿಕರು ನನ್ನ ಗಮನಕ್ಕೆ ಹಲವು ಬಾರಿ ತಂದಿದ್ದಾರೆ. ಕೆಲವರು ದೇವಿಯ ದರ್ಶನಕ್ಕೆ ಎಂದು ಬರುವಾಗ ಬೇರೆ ಬೇರೆ ತರಹದ ಬಟ್ಟೆಗಳನ್ನು ಧರಿಸಿಕೊಂಡು ಬರುತ್ತಾರೆ. ಇದು ಕೆಲವು ಸಲ ಮುಜುಗರಕ್ಕೆ ಕಾರಣವಾಗುತ್ತದೆ.
ಹೊರ ರಾಜ್ಯ ಕೇರಳ ಹಾಗೂ ನಮ್ಮ ರಾಜ್ಯದ ಕೆಲವು ದೇವಸ್ಥಾನಗಳಲ್ಲೂ ಸಹ ಡ್ರೆಸ್ ಕೋಡ್ ಇದೆ. ಅದೇ ರೀತಿ ಚಾಮುಂಡಿ ಬೆಟ್ಟಕ್ಕೆ ಬರುವ ಪುರುಷರು ಹಾಗೂ ಮಹಿಳಾ ಭಕ್ತರಿಗೆ ಸಾಂಪ್ರದಾಯಿಕ ರೀತಿಯ ಉಡುಗೆಗಳನ್ನು ಪ್ರತ್ಯೇಕವಾಗಿ ಡ್ರೆಸ್ ಕೋಡ್ ರೀತಿಯಲ್ಲಿ ನಿಗದಿ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಬರುವವರಿಗೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರುವಂತೆ ಪ್ರತಾಪ್ ಸಿಂಹ ಮನವಿ ಮಾಡಿದ್ದರು.
ಇದನ್ನೂ ಓದಿ : ಪುರಿ ಅಭಿವೃದ್ಧಿಗಾಗಿ ತಂದೆಯ ಸ್ಮಾರಕವನ್ನೇ ಕೆಡವಲು ಆದೇಶಿಸಿದ್ದ ನವೀನ್ ಪಟ್ನಾಯಕ್!