ಮೀರತ್(ಉತ್ತರಪ್ರದೇಶ): ಬ್ಯಾಂಕ್ ಮ್ಯಾನೇಜರ್ ಮನೆಯಲ್ಲಿ ದರೋಡೆ ಮಾಡಿದ ದುಷ್ಕರ್ಮಿಗಳು, ಮ್ಯಾನೇಜರ್ ಹೆಂಡತಿ ಮತ್ತು ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿ ಡಬಲ್ ಬೆಡ್ ಬಾಕ್ಸ್ನಲ್ಲಿ ಹಾಕಿ ಪರಾರಿಯಾದ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಮನೆಗೆ ಬೀಗ ಹಾಕಿದ್ದಲ್ಲದೇ, ಕರೆ ಮಾಡಿದರೂ ಫೋನ್ ತೆಗೆಯದಿದ್ದಾಗ ಅನುಮಾನ ಬಂದು ಕೀ ಮುರಿದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಸಂದೀಪ್ಕುಮಾರ್ ಎಂಬುವರ ಮನೆಗೆ ಭಾನುವಾರ ರಾತ್ರಿ ದುಷ್ಕರ್ಮಿಗಳು ನುಗ್ಗಿದ್ದಾರೆ. ಈ ವೇಳೆ ಪತ್ನಿ ಹಾಗೂ 5 ಮಗ ಮನೆಯಲ್ಲಿದ್ದರು. ಹಂತಕರು ಮನೆಯಲ್ಲಿ ದರೋಡೆ ಮಾಡಿದ್ದಲ್ಲದೇ, ವಿಷಯ ಯಾರಿಗೂ ತಿಳಿಯಬಾರದು ಎಂದು ಇಬ್ಬರನ್ನೂ ಕೊಲೆ ಮಾಡಿದ್ದಾರೆ. ಬಳಿಕ ಹೊರಬಂದು ಮನೆಯ ಹೊರಗಡೆಯಿಂದ ಬೀಗ ಹಾಕಿ ಪರಾರಿಯಾಗಿದ್ದಾರೆ.
ಮನೆಗೆ ಬಂದ ಮ್ಯಾನೇಜರ್ ಪತ್ನಿಗೆ ಕರೆ ಮಾಡಿದ್ದಾರೆ. ಸತತವಾಗಿ ಕರೆ ಮಾಡಿದರೂ ಸ್ವೀಕರಿಸದ್ದರಿಂದ ಕುಟುಂಬಸ್ಥರೊಂದಿಗೆ ಮನೆಯ ಬೀಗ ಮುರಿದಿದ್ದಾರೆ. ಮನೆಯೊಳಗಡೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡುಬಂದಿದೆ. ಅನುಮಾನ ಬಂದು ಮಲಗುವ ಕೋಣೆ ಪರಿಶೀಲಿಸಿದಾಗ ಇಬ್ಬರ ಶವಗಳು ಪತ್ತೆಯಾಗಿವೆ.
ಸಂಬಂಧಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳು ದರೋಡೆ ಮಾಡಿದ ಬಳಿಕ ಕೊಲೆ ಮಾಡಿದ್ದಲ್ಲದೇ, ಮನೆಯಲ್ಲಿದ್ದ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ, ಮಹಿಳೆಯ ಮೊಬೈಲ್‌ನಿಂದ ಕೆಲವು ವಾಟ್ಸಾಪ್ ಚಾಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಚಿತರೇ ಹತ್ಯೆ ಮಾಡಿರುವ ಬಗ್ಗೆ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ.
ಓದಿ: ಅಲೆಕ್ಸಾ ಮೂಲಕ ಜೋರು ಸಂಗೀತ ಕೇಳಿದ್ದಕ್ಕೆ ಕೇಸ್.. ಇದನ್ನು ಒಪ್ಪಲಾಗದು ಎಂದ ಕೋರ್ಟ್