ಸೂರತ್ (ಗುಜರಾತ್) : ಈ ವಿಡಿಯೋ ಎಂಥವರನ್ನು ಅರೇ ಕ್ಷಣ ದಂಗಾಗಿಸದೇ ಇರದು. ಮಾನವ ಇಷ್ಟೊಂದು ಕ್ರೂರಿಯಾ ಎಂದೆನಿಸದೇ ಇರದು. ಇಂತಹ ನೀಚ ಜನರ ಮಧ್ಯೆ ನಾವೆಲ್ಲ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡದೆ ಇರದು.
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಇದು. ಇಬ್ಬರು ಯುವಕರು ಬೈಕ್ನ ಹಿಂಭಾಗಕ್ಕೆ ಹಗ್ಗದಿಂದ ನಾಯಿಯನ್ನು ಕಟ್ಟಿ, ಬಹುದೂರದ ವರೆಗೆ ಅದನ್ನು ಎಳೆದೊಯ್ದಿದ್ದಾರೆ. ಈ ವೇಳೆ ರಸ್ತೆಗೆ ಹಾಕಿದ ಟಾರ್ ತೆರೆದು ನಾಯಿ ಒದ್ದಾಡುವ ದೃಶ್ಯ ಮನಕಲಕುವಂತಿದೆ. ಕುತ್ತಿಗೆಗೆ ಹಗ್ಗವನ್ನು ಕಟ್ಟಿ ನಾಯಿಯನ್ನು ನಿಷ್ಕರುಣೆಯಿಂದ ರಸ್ತೆಯ ಮೇಲೆ ಎಳೆದೊಯ್ಯುವ ವಿಡಿಯೋ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ವಿಐಪಿ ರಸ್ತೆ ಭಗವಾನ್ ಮಹಾವೀರ್ ಕಾಲೇಜಿನ ಮುಂದೆ ಯುವಕರಿಬ್ಬರು ನಾಯಿಯನ್ನು ಮೋಟಾರ್ ಸೈಕಲ್ ಹಿಂದೆ ಕಟ್ಟಿ ಎಳೆಯುವುದನ್ನು ದಾರಿಹೋಕನೊಬ್ಬ ನೋಡಿದ್ದಾನೆ. ನಾಯಿ ಒದ್ದಾಡುವುದನ್ನು ಕಂಡು, ಆ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಘಟನೆಯ ವಿಡಿಯೋ ಸೆರೆ ಹಿಡಿದಿದ್ದಾನೆ. ಆದರೆ ಗಾಯಗೊಂಡ ಶ್ವಾನ ಬೈಕ್ ನಿಲ್ಲಿಸುವ ಹೊತ್ತಿಗಾಗಲೇ ಮೃತಪಟ್ಟಿದೆ. ಇದರಿಂದ ಆಕ್ರೋಶಗೊಂಡ ಆ ದಾರಿಹೋಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ವೈರಲ್ ಆದ ಈ ವಿಡಿಯೋವನ್ನು ಪ್ರಾಣಿ ಸುರಕ್ಷತಾ ಸಂಸ್ಥೆಯ ಸ್ಥಳೀಯ ಕಾರ್ಯದರ್ಶಿಯಾಗಿರುವ ಸಮಾಜ ಸೇವಕಿ ಸಲೋನಿ ರತಿ ನೋಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಖತೋದರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರು ಯುವಕರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಎಂವಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಬೈಕ್ನ ನಂಬರ್ ಆಧಾರದ ಮೇಲೆ ಸೂರತ್ ಮಹಾನಗರ ಪಾಲಿಕೆಯ (ಎಸ್‌ಎಂಸಿ) ನೈರ್ಮಲ್ಯ ಕೆಲಸಗಾರ ಹಿತೇಶ್ ಪಟೇಲ್ (31) ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ನಡೆದಿದೆ.