ಹೈದರಾಬಾದ್ : 'ಗುಲಾಬ್' ಚಂಡಮಾರುತದ ಅಬ್ಬರದಿಂದಾಗಿ ತೆಲಂಗಾಣದ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ, ಅನೇಕ ಹಳ್ಳಿಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಮಧ್ಯೆ, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆವೊಂದು 16 ತಿಂಗಳ ಮಗುವಿನ ಪ್ರಾಣ ರಕ್ಷಣೆ ಮಾಡಿದೆ.
ಡ್ರೋಣ್ಗಳ ಮೂಲಕ ವಿವಿಧ ಕುಗ್ರಾಮಗಳಿಗೆ ಔಷಧಿ ಸಾಗಾಣಿಕೆ ಮಾಡುವ ಯೋಜನೆಗೆ ತೆಲಂಗಾಣ ಸರ್ಕಾರ ಈಗಾಗಲೇ ಚಾಲನೆ ನೀಡಿಲಾಗಿದೆ. ಆ ಯೋಜನೆ ಮೂಲಕ ಇದೀಗ 16 ತಿಂಗಳ ಮಗುವಿನ ಪ್ರಾಣ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿರಿ: ಡ್ರೋಣ್ ಮೂಲಕ ಔಷಧಿ ಸಾಗಾಣಿಕೆ.. ತೆಲಂಗಾಣ ಸರ್ಕಾರದಿಂದ ವಿನೂತನ ಯೋಜನೆ..
ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ಪಿಟ್ಲಂ ಮಂಡಲದಲ್ಲಿರುವ ಕುರ್ತಿ ಗ್ರಾಮ ಕಳೆದ ಐದು ದಿನಗಳಿಂದ ಪ್ರವಾಹದಲ್ಲಿ ಸಂಪೂರ್ಣ ಸಿಲುಕಿದೆ. ಹೀಗಾಗಿ, ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಗ್ರಾಮದ 16 ತಿಂಗಳ ಮಗು ತೀವ್ರ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿತ್ತು.
ಇದಕ್ಕೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ರಾಂಪುರ್ ಗ್ರಾಮದಲ್ಲಿನ ಡ್ರೋಣ್ ಮೂಲಕ ಗ್ರಾಮಸ್ಥರಿಗೆ ಔಷಧಿ ತಲುಪಿಸಿದ್ದಾರೆ. ಇದೀಗ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.
ದೂರದ ಪ್ರದೇಶಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಔಷಧಿ ಸಾಗಿಸುವ ಯೋಜನೆ ತೆಲಂಗಾಣದಲ್ಲಿ ಆರಂಭಗೊಂಡಿದೆ. ತುರ್ತು ಸಂದರ್ಭಗಳಲ್ಲಿ ಔಷಧಿ ಹಾಗೂ ಲಸಿಕೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಡ್ರೋಣ್ ಮೂಲಕ ಸುಮಾರು 40 ಕಿ.ಮೀ ದೂರದವರೆಗೆ 15 ಬಗೆಯ ಔಷಧಿ ಹಾಗೂ ಲಸಿಕೆ ಸಾಗಾಣಿಕೆ ಮಾಡಬಹುದಾಗಿದೆ.