ಕರೀಂನಗರ(ತೆಲಂಗಾಣ): ವೈದ್ಯರು ಎಚ್ಚರ ತಪ್ಪಿದ್ರೆ ಅನಾಹುತ ಖಂಡಿತ. ಹೀಗೆ ಇಲ್ಲೊಬ್ಬ ವೈದ್ಯರು ತಮ್ಮ ನಿರ್ಲಕ್ಷ್ಯದಿಂದ ಹೆರಿಗೆ ಶಸ್ತ್ರಚಿಕಿತ್ಸೆಗೆಂದು ಒಬ್ಬಾಕೆ ಬಂದಿದ್ರೆ, ಟೆಸ್ಟ್ಗೆ ಬಂದ ಇನ್ನೊಬ್ಬಾಕೆಯ ಹೊಟ್ಟೆ ಕೊಯ್ದಿದ್ದಾರೆ. ಈ ಘಟನೆ ಕರೀಂನಗರ ಜಿಲ್ಲೆಯ ಮಾತಾಶಿಶು ಸಂರಕ್ಷಣಾ ಕೇಂದ್ರದಲ್ಲಿ ನಡೆದಿದೆ.
ಕರೀಂನಗರದ ನರ್ಸಿಂಗಾಪುರದ ನಿವಾಸಿ ಮಾಲತಿ ಏಳು ತಿಂಗಳ ಗರ್ಭವತಿ. ಆಕೆ ಗುರುವಾರ ಅಸ್ವಸ್ಥಗೊಂಡು, ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಮಾತಾಶಿಶು ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಅಲ್ಲಿ ಆಕೆಗೆ ಸ್ಕ್ಯಾನಿಂಗ್ ಮಾಡಲಾಗಿದೆ. ಈ ವೇಳೆ ಗರ್ಭದೊಳಗೆ ಇಬ್ಬರು ಮಕ್ಕಳಿರುವುದು ಕಂಡುಬಂದಿದೆ. ಇವುಗಳ ಪೈಕಿ ಒಂದು ಮಗು ಬದುಕುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ಸೋಮವಾರ ಗರ್ಭಕೋಶಕ್ಕೆ ಹೊಲಿಗೆ ಮಾಡುವ ಬಗ್ಗೆ ಹೇಳಿದ್ದರು.
ಅದರಂತೆ ಸೋಮವಾರ ಮುಂಜಾನೆ ಮಾಲತಿಯನ್ನು ಆಪರೇಷನ್ ಥಿಯೇಟರ್ಗೆ ಕರೆದೊಯ್ದಿದ್ದಾರೆ. ಆದ್ರೆ ಅಲ್ಲಿರುವ ವೈದ್ಯರು ಇನ್ನೊಬ್ಬರ ಕೇಸ್ ಶೀಟ್ ನೋಡಿಕೊಂಡು, ಮಾಲತಿ ಹೊಟ್ಟೆಯ ಆಪರೇಶನ್ ಮಾಡಿದರು. ಈ ಸಂದರ್ಭ ಆಕೆ ಗಟ್ಟಿಯಾಗಿ ಭಯದಲ್ಲಿ ಚೀರಿಕೊಂಡಿದ್ದಾಳೆ. ತಕ್ಷಣ ಎಚ್ಚೆತ್ತ ವೈದ್ಯರಿಗೆ ತಮ್ಮ ಅಚಾತುರ್ಯದ ಸಂಗತಿ ತಿಳಿದಿದೆ. ತಕ್ಷಣ ಆಕೆಯ ಹೊಟ್ಟೆಗೆ ಹೊಲಿಗೆ ಹಾಕಿ ಕಳುಹಿಸಿದ್ದಾರೆ.
ಇನ್ನು ಮಾಲತಿಯ ಸಮಯ ಪ್ರಜ್ಞೆಯಿಂದ ಆಗುವ ದೊಡ್ಡ ಅನಾಹುತ ತಪ್ಪಿದೆ. ಘಟನೆಯಿಂದ ಆಕ್ರೋಶಗೊಂಡ ಪತಿ ನರೋತ್ತಮ ರೆಡ್ಡಿ, ಆಸ್ಪತ್ರೆ ಸೂಪರಿಂಟೆಂಡೆಂಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.