ನವದೆಹಲಿ: ಪತ್ನಿಗೆ "ತ್ರಿವಳಿ ತಲಾಖ್" ನೀಡುವುದನ್ನು ದೇಶದಲ್ಲಿ ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಆದಾಗ್ಯೂ, ತನ್ನ ಪತ್ನಿಗೆ ತಲಾಖ್ ಮೂಲಕ ವಿಚ್ಚೇದನ ನೀಡಿ ವಿದೇಶಕ್ಕೆ ಹಾರಲು ಮುಂದಾಗಿದ್ದ ವೈದ್ಯನೊಬ್ಬನನ್ನು ದೆಹಲಿ ಪೊಲೀಸರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. 40 ವರ್ಷದ ದೆಹಲಿ ಮೂಲದ ವೈದ್ಯ, 36 ವರ್ಷದ ತನ್ನ ಪತ್ನಿಗೆ 2022ರ ಅಕ್ಟೋಬರ್ 13 ರಂದು ತಲಾಖ್ ಹೇಳಿ ವಿಚ್ಚೇದನ ಘೋಷಿಸಿದ್ದ.
ಆದರೆ, ಇದು ಮಾನ್ಯವಲ್ಲದ ಕಾರಣ ಪತ್ನಿ ಕಾನೂನು ಹೋರಾಟಕ್ಕೆ ಮುಂದಾಗಿ ದಿಲ್ಲಿಯ ಕಲ್ಯಾಣಪುರಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದರು. ಕಾನೂನುಬಾಹಿರವಾಗಿ ವಿಚ್ಚೇದನ ನೀಡಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದ್ದರು. ಅದರಂತೆ ಇಂದು ಬ್ರಿಟನ್ಗೆ ಗೌಪ್ಯವಾಗಿ ಪರಾರಿಯಾಗಲು ಮುಂದಾಗಿದ್ದ ವೈದ್ಯನನ್ನು ನಿಖರ ಮಾಹಿತಿಯ ಮೇರೆಗೆ ದಾಳಿ ನಡೆಸಿದ ದೆಹಲಿ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಿ, ತಮ್ಮೊಂದಿಗೆ ಕರೆದೊಯ್ದಿದ್ದಾರೆ.
ಏನಿದು ತಲಾಖ್ ವಿವಾದ: ‘ತಲಾಖ್, ತಲಾಖ್, ತಲಾಖ್’ ಎಂದು ಮೂರು ಬಾರಿ ಹೇಳುವ ಮೂಲಕ ಪುರುಷರು, ಪತ್ನಿಗೆ ವಿಚ್ಛೇದನ ನೀಡುವುದು ಮುಸ್ಲಿಂ ಸಮುದಾಯದ ಪದ್ಧತಿಯಾಗಿತ್ತು. ಇದು ಮಹಿಳಾ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನುಬಾಹಿರವಾದ ಕಾರಣ ಕೇಂದ್ರ ಸರ್ಕಾರ ಇದರ ವಿರುದ್ಧ ಸಂಸತ್ತಿನಲ್ಲಿ ಬಿಲ್ ಮಂಡಿಸಿತ್ತು. ಬಳಿಕ ಇದು ಸುಪ್ರೀಂಕೋರ್ಟ್ ಮೆಟ್ಟಿಲೇರಿ ವಿಚಾರಣೆ ನಡೆದು ಇದೊಂದು ಅನಾಗರಿಕ ಮತ್ತು ಮಹಿಳಾ ವಿರೋಧ ಧೋರಣೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಬಳಿಕ ತಲಾಖ್ ನೀಡುವುದು ಭಾರತದಲ್ಲಿ ಕಾನೂನುಬಾಹಿರ ಎಂದು ಘೋಷಿಸಲಾಯಿತು. ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಕಾಯಿದೆ- 2019 ರ ಪ್ರಕಾರ, ಪತಿ ತಲಾಖ್ ಎಂದು ಹೇಳುವ ಮೂಲಕ ಯಾವುದೇ ರೀತಿಯ ವಿಚ್ಚೇದನ ನೀಡುವುದು ಅಸಿಂಧು ಎಂದು ಪರಿಗಣಿಸಲಾಗಿದೆ. ತ್ರಿವಳಿ ತಲಾಖ್ ಅನ್ನು ಕಾನೂನಿನಡಿ ಶಿಕ್ಷಾರ್ಹವೆಂದು ಪರಿಗಣಿಸಲಾಗಿದೆ. ತಲಾಖ್ ಮೂಲಕ ವಿಚ್ಛೇದನ ಪಡೆಯುವ ವಿಧಾನವನ್ನು ನಿಷೇಧಿಸಲಾಗಿದೆ.
ಕಾನೂನುಬಾಹಿರವಾಗಿ ತಲಾಖ್ ನೀಡಿ ವಿಚ್ಚೇದನ ಘೋಷಿಸುವ ವ್ಯಕ್ತಿಗೆ ಹೊಸ ಕಾನೂನಿನ ಅನ್ವಯ ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ದಂಡದ ಜೊತೆಗೆ ಮೂರು ವರ್ಷಗಳವರೆಗೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಮುಸ್ಲಿಂ ಸಂಸ್ಥೆಗಳು ತಮ್ಮ ಸಮುದಾಯದ ವೈಯಕ್ತಿಕ ಹಕ್ಕುಗಳಿಗೆ ಅಡ್ಡಿಪಡಿಸುವ ಹೊಸ ಕಾನೂನನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದವು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನೇ ಪ್ರಶ್ನಿಸಿತ್ತು.
2017 ರ ಆಗಸ್ಟ್ನಲ್ಲಿ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ನೀಡುವುದನ್ನು ರದ್ದು ಮಾಡಿ ಆದೇಶಿಸಿದೆ. ಕೇಂದ್ರ ಸರ್ಕಾರ 2019 ರಲ್ಲಿ ಮುಸ್ಲಿಂ ಮಹಿಳಾ ಕಾಯ್ದೆಯನ್ನು ಅಂಗೀಕರಿಸಿದೆ. ಇದರಂತೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ಪಡೆಯುವುದನ್ನು ಅಸಾಂವಿಧಾನಿಕ ಎಂದು ಪರಿಗಣಿಸಲಾಗಿದೆ.
ಓದಿ: ಅಯೋಧ್ಯೆ ತ್ರಿವಳಿ ತಲಾಖ್ ಐತಿಹಾಸಿಕ ತೀರ್ಪಿತ್ತ ಕರ್ನಾಟಕದ ನ್ಯಾಅಬ್ದುಲ್ ನಜೀರ್ ಈಗ ಆಂಧ್ರ ರಾಜ್ಯಪಾಲ