ನಾಸಿಕ್(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಜಾತಿ ಪಂಚಾಯಿತಿ ವ್ಯವಸ್ಥೆ ಇನ್ನೂ ಅಸ್ತಿತ್ವದಲ್ಲಿದ್ದು, ಕೆಲವು ವಿಚಿತ್ರ ತೀರ್ಪುಗಳಿಗೆ ಸಾಕ್ಷಿಯಾದ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಈಗ ಈ ಪಂಚಾಯಿತಿ ಪ್ರಕಟಿಸಿರುವ ತೀರ್ಪು ವಿಚಿತ್ರ ಹಾಗೂ ಸಂವಿಧಾನಾತ್ಮಕ ಕಾನೂನನ್ನು ಅಣಕಿಸುವಂತಿದೆ. ಹೌದು, ಪಂಚಾಯಿತಿ ಸಭೆ ಕರೆದು ಮಹಿಳೆಯ ಅನುಪಸ್ಥಿತಿಯಲ್ಲೇ ಕೇವಲ ಒಂದು ರೂಪಾಯಿ ಜೀವನೋಪಾಯ ಪರಿಹಾರ ನೀಡಿ, ಫೋನ್ ಕರೆ ಮೂಲಕವೇ ವಿಚ್ಛೇದನ ನಿರ್ಧಾರ ಪ್ರಕಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಾಸಿಕ್ನ ಸಿನ್ನಾರ್ ಎಂಬಲ್ಲಿನ ಮಹಿಳೆಗೆ ಅಹಮದ್‌ನಗರ ಜಿಲ್ಲೆಯ ಲೋನಿ ಪ್ರದೇಶದ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ತಾನು ತವರು ಮನೆಯಲ್ಲೇ ಇದ್ದ ಸಂದರ್ಭದಲ್ಲಿ ತನಗೆ ಮಾಹಿತಿ ನೀಡದೆ, ವಿಚ್ಛೇದನ ನೀಡಿ ಅನ್ಯಾಯವೆಸಗಲಾಗಿದೆ. ಹೀಗಾಗಿ ತಾನು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.ಮದುವೆಯಾದ ಕೆಲ ದಿನಗಳಲ್ಲೇ ಪತಿಯ ಮನೆಯಲ್ಲಿ ಕಿರುಕುಳ ನೀಡಿದ್ದು, ಬಳಿಕ ಮಹಿಳೆಯು ತವರುಮನೆ ಸಿನ್ನಾರ್ಗೆ ಬಂದು ನೆಲೆಸಿದ್ದಳು. ಮಹಿಳೆಯು ಮನೆಗೆ ವಾಪಸಾಗದ ಕಾರಣ, ಪತಿಯ ಮನೆಯವರು ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಆದರೆ, ಕಾನೂನು ಕ್ರಮಕ್ಕೆ ಮುಂದಾಗದ ಕುಟುಂಬವು ಪಂಚಾಯಿತಿ ಮೊರೆ ಹೋಗಿದೆ.
ಅದರಂತೆ ಲೋನಿಯಲ್ಲಿನ ವೈದು ಸಮುದಾಯದ ಜಾತಿ ಪಂಚಾಯಿತಿ ಸೇರಿದ್ದು, ವಿವಾಹಿತ ಮಹಿಳೆಗೆ ಆಹ್ವಾನ ನೀಡಿರಲಿಲ್ಲ. ಆಕೆಯ ಅನುಪಸ್ಥಿತಿಯಲ್ಲೇ ಜಾತಿ ಪಂಚಾಯಿತಿಯು ಫೋನ್ ಮೂಲಕವೇ ವಿಚ್ಛೇದನ ಘೋಷಿಸಿದೆ. ಮಹಿಳೆಯ ಮಾವ ಆಕೆಗೆ ಒಂದು ರೂಪಾಯಿ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾನೆ. ಇನ್ನೊಂದೆಡೆ ಈ ಪಂಚಾಯಿತಿಯ ತೀರ್ಪಿಗೂ ಎಂಟು ದಿನ ಮೊದಲೇ ಪತಿಯು ಮತ್ತೊಂದು ಮದುವೆಯಾಗಿದ್ದಾನೆ ಎಂದು ಹೇಳಲಾಗ್ತಿದೆ.
ಪಂಚಾಯಿತಿ ಹಿರಿಯರ ಅಡ್ಡಿ ಹಾಗೂ ಇನ್ನೊಂದೆಡೆ ಸಂತ್ರಸ್ತ ಮಹಿಳೆಯ ಕುಟುಂಬ ಕೂಡ ಆರ್ಥಿಕವಾಗಿ ಸಬಲವಾಗಿರದ ಕಾರಣ ಆಕೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ, ಈ ವಿಷಯ ತಿಳಿದ ಮುತ್ತಮತಿ ಅಭಿಯಾನದ ಸಾಮಾಜಿಕ ಕಾರ್ಯಕರ್ತರು ಆಕೆಗೆ ಬೆಂಬಲ ನೀಡಿದ್ದಾರೆ. ಅವರ ಸಲಹೆಯಂತೆ ಸಂತ್ರಸ್ತೆಯು ಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡಂತೆ ತೀರ್ಪು ನೀಡಿದ ಪಂಚಾಯಿತಿ ಹಿರಿಯರ ವಿರುದ್ಧ ದೂರು ನೀಡಿದ್ದಾಳೆ.
ಇದನ್ನೂ ಓದಿ: ರೋಗಿ ಇದ್ದ ಆ್ಯಂಬುಲೆನ್ಸ್ನಲ್ಲಿ ದಾರಿ ಮಧ್ಯೆಯೇ ಇಂಧನ ಖಾಲಿ: ಟ್ರ್ಯಾಕ್ಟರ್‌ಗೆ ಕಟ್ಟಿ ಎಳೆದೊಯ್ದರು!