ಡಿಸೆಂಬರ್ 8, 2023ರಂದು ಲೋಕಸಭೆಯು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವಾ ಮೊಯಿತ್ರಾ ಅವರನ್ನು ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಧ್ವನಿ ಮತದಿಂದ ಸಂಸತ್ತಿನಿಂದ ಹೊರಹಾಕಲಾಯಿತು. ಇದಕ್ಕೂ ಮುನ್ನ ಮೊಯಿತ್ರಾ ಅವರ ಮೇಲಿನ ಆರೋಪಗಳ ಬಗ್ಗೆ ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ಚರ್ಚೆಗೆ ತಯಾರಿ ನಡೆಸಲು ಸಾಕಷ್ಟು ಸಮಯ ನೀಡಲಾಗಿಲ್ಲ ಮತ್ತು ಮೊಯಿತ್ರಾ ಅವರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಪ್ರತಿಪಕ್ಷಗಳು ಗಲಾಟೆ ಎಬ್ಬಿಸಿದವು. ಇದರ ಮಧ್ಯೆಯೇ ಸಮಿತಿಯ ವರದಿಯ ಮೇಲೆ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು. 2005ರ ಪೂರ್ವನಿದರ್ಶನವನ್ನು ಉಲ್ಲೇಖಿಸಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮೊಯಿತ್ರಾ ಅವರನ್ನು ಉಚ್ಚಾಟಿಸುವ ನಿರ್ಣಯ ಮಂಡಿಸಿದರು. ಸಂಸದೆಯಾಗಿ ಮೊಯಿತ್ರಾ ಅವರ ನಡವಳಿಕೆ ಸೂಕ್ತವಾಗಿಲ್ಲದ ಕಾರಣ ಅವರು ಸಂಸದೆಯಾಗಿ ಮುಂದುವರಿಯುವುದು ಸಮರ್ಥನೀಯವಲ್ಲ ಎಂದು ಜೋಶಿ ಹೇಳಿದರು.
ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಉದ್ಯಮಕ್ಕೆ ಲಾಭವಾಗುವಂಥ ಪ್ರಶ್ನೆಗಳನ್ನು ಮೊಯಿತ್ರಾ ಸಂಸತ್ತಿನಲ್ಲಿ ಕೇಳಿದ್ದಾರೆ ಮತ್ತು ಇದಕ್ಕಾಗಿ ಅವರು ಹಿರಾನಂದಾನಿ ಸಂಸ್ಥೆಯಿಂದ ಉಡುಗೊರೆಗಳು ಮತ್ತು ಹಣ ಪಡೆದಿದ್ದಾರೆ ಎಂದು ಆರೋಪಿಸಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಸ್ಪೀಕರ್ಗೆ ದೂರು ನೀಡಿದ್ದರು. ಈ ದೂರನ್ನು ಸ್ಪೀಕರ್ ನೈತಿಕ ಸಮಿತಿಗೆ ವಿಚಾರಣೆಗಾಗಿ ವರ್ಗಾಯಿಸಿದ್ದರು.
ಲೋಕಸಭೆಯ ವೆಬ್ಸೈಟ್ನಲ್ಲಿ ತಮ್ಮ ಪರವಾಗಿ ಪ್ರಶ್ನೆಗಳನ್ನು ಅಪ್ಲೋಡ್ ಮಾಡಲು ಸಂಸದೆ ಮೊಯಿತ್ರಾ ಹಿರಾನಂದಾನಿ ಸಂಸ್ಥೆಯ ವ್ಯಕ್ತಿಗಳೊಂದಿಗೆ ತನ್ನ ಪಾಸ್ವರ್ಡ್ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನೈತಿಕ ಸಮಿತಿಯು ದೂರುದಾರರ ಸಾಕ್ಷ್ಯಗಳನ್ನು ಪರಿಗಣಿಸಿತು ಮತ್ತು ಆರೋಪಿ ಮೊಯಿತ್ರಾರಿಗೆ ತನ್ನ ಹೇಳಿಕೆ ದಾಖಲಿಸುವಂತೆ ಸೂಚಿಸಿತು. ಆದರೆ ಮೊಯಿತ್ರಾ ನೈತಿಕ ಸಮಿತಿಯ ಮುಂದೆ ತಮ್ಮ ಹೇಳಿಕೆ ದಾಖಲಿಸಲು ನಿರಾಕರಿಸಿದರು. ನಂತರ ಈ ವಿಷಯದ ಬಗ್ಗೆ ಚರ್ಚಿಸಿದ ನೈತಿಕ ಸಮಿತಿಯು 9 ನವೆಂಬರ್ 2023ರಂದು ಸ್ಪೀಕರ್ಗೆ ತನ್ನ ವರದಿಯನ್ನು ಸಲ್ಲಿಸಿತ್ತು.
ಒಂದು ಕ್ಷಣ ನಾವು ಉಡುಗೊರೆ ಮತ್ತು ಹಣದ ವಿಷಯವನ್ನು ಬದಿಗಿಟ್ಟರೆ, ಸಂಸತ್ತಿನ ಸದಸ್ಯನು ತಾನು ಪ್ರತಿನಿಧಿಸುವ ತನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೆ ಅದಕ್ಕಾಗಿ ಅವನನ್ನು ದೂಷಿಸಲಾಗುವುದಿಲ್ಲ. ಆದಾಗ್ಯೂ, ಈ ವಿಷಯದಲ್ಲಿ ಕೆಲ ನಿಯಮಗಳಿವೆ. ಮೊದಲನೆಯದಾಗಿ, ಸಂಸತ್ ಸದಸ್ಯನಾಗಿ ಆಯ್ಕೆಯಾದ ವ್ಯಕ್ತಿಯು ಕೂಡಲೇ ತನ್ನ ವೈಯಕ್ತಿಕ ವೃತ್ತಿಪರ ಮತ್ತು ತಾನು ನಡೆಸುವ ವ್ಯವಹಾರಗಳ ಬಗ್ಗೆ ಹಿತಾಸಕ್ತಿಗಳ ರಿಜಿಸ್ಟರ್ನಲ್ಲಿ ನಮೂದಿಸಬೇಕಾಗುತ್ತದೆ. ಈ ವಿವರಗಳನ್ನು ಇತರ ಯಾವುದೇ ಸಂಸದರು ನೋಡಬಹುದು. ಇದು ಮಾಹಿತಿ ಹಕ್ಕು ಕಾಯ್ದೆ, 2005 ರ ಅಡಿಯಲ್ಲಿ ಸಾಮಾನ್ಯ ನಾಗರಿಕರಿಗೂ ಲಭ್ಯವಿದೆ.
ಇದಲ್ಲದೆ ಯಾವುದೇ ಸಂಸದ ತನ್ನ ವೃತ್ತಿಪರ ಅಥವಾ ವ್ಯವಹಾರ ಹಿತಾಸಕ್ತಿಗಳೊಂದಿಗೆ ಯಾವುದೇ ಸಂಬಂಧ ಹೊಂದಿರುವ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದರೆ ಅದಕ್ಕೂ ಮುನ್ನ ಆ ವಿಷಯವನ್ನು ಘೋಷಣೆ ಮಾಡಬೇಕಾಗುತ್ತದೆ. ಉದಾಹರಣೆಗೆ, ವಕೀಲ ವೃತ್ತಿಯಲ್ಲಿರುವ ಒಬ್ಬ ಸಂಸದ ತನ್ನ ಕಕ್ಷಿದಾರನೊಬ್ಬನ ಹಿತಾಸಕ್ತಿಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಲು ಬಯಸಿದರೆ, ಹಾಗೆ ಮಾಡುವ ಮುನ್ನ ಆ ಸಂಸದ ತನ್ನ ಕಕ್ಷಿದಾರ ಮತ್ತು ಆ ಹಿತಾಸಕ್ತಿಯ ವಿಷಯದ ಬಗ್ಗೆ ಘೋಷಣೆ ಮಾಡಬೇಕಾಗುತ್ತದೆ. ಅಂತೆಯೇ, ಒಬ್ಬ ಸದಸ್ಯನು ಪ್ರಶ್ನೆಗೆ ಸಂಬಂಧಿಸಿದ ಕಂಪನಿಯಲ್ಲಿ ವ್ಯವಹಾರ ಆಸಕ್ತಿಗಳನ್ನು ಹೊಂದಿದ್ದರೆ, ಅದನ್ನು ಎತ್ತುವ ಮೊದಲು ಅವನು ಆ ಬಗ್ಗೆ ಪೂರ್ವ ಘೋಷಣೆ ಮಾಡಬೇಕು.
ಇದಲ್ಲದೆ, ಸಂಸತ್ ಸದಸ್ಯರು ನೀತಿ ಸಂಹಿತೆಯನ್ನು ಕೂಡ ಪಾಲಿಸಬೇಕಾಗುತ್ತದೆ. ಲೋಕಸಭೆಯ ಸದಸ್ಯರಿಗೆ ಯಾವುದೇ ಖಚಿತ ನೀತಿ ಸಂಹಿತೆ ಇಲ್ಲದಿದ್ದರೂ, ಸದಸ್ಯರ ಸಭ್ಯತೆ ಮತ್ತು ಘನತೆಯ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳಲ್ಲಿ ವಿವಿಧ ನಿಬಂಧನೆಗಳಿವೆ.
ಮತ್ತೊಂದೆಡೆ, ಏಪ್ರಿಲ್ 20, 2005ರಂದು ಸದನವು ಅಂಗೀಕರಿಸಿದ ರಾಜ್ಯಸಭೆಯ ನೈತಿಕ ಸಮಿತಿಯ ನಾಲ್ಕನೇ ವರದಿಯಲ್ಲಿ, ಸದನದ ಸದಸ್ಯರಿಗೆ 14 ಅಂಶಗಳ ನೀತಿ ಸಂಹಿತೆಯನ್ನು ಶಿಫಾರಸು ಮಾಡಲಾಗಿದೆ. ಈ ನೀತಿ ಸಂಹಿತೆಯ ಪ್ರಮುಖ ಅಂಶಗಳು ಹೀಗಿವೆ:
- ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಮತ್ತು ಅವರು ಹೊಂದಿರುವ ಸಾರ್ವಜನಿಕ ನಂಬಿಕೆಯ ನಡುವೆ ಹಿತಾಸಕ್ತಿ ಸಂಘರ್ಷವಿದೆ ಎಂದು ಅವರಿಗೆ ತಿಳಿದರೆ ಅವರು ತಮ್ಮ ಖಾಸಗಿ ಹಿತಾಸಕ್ತಿಗಳನ್ನು ತಮ್ಮ ಸಾರ್ವಜನಿಕ ಕಚೇರಿಯ ಕರ್ತವ್ಯಕ್ಕೆ ಅಡ್ಡಿಯಾಗದ ರೀತಿಯಲ್ಲಿ ಅಂಥ ವಿಷಯಗಳನ್ನು ಪರಿಹರಿಸಬೇಕು.
- ಸಂಸತ್ತಿಗೆ ಅಪಖ್ಯಾತಿ ತರುವ ಮತ್ತು ತಮ್ಮ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಸದಸ್ಯರು ಮಾಡಬಾರದು.
- ಸಾರ್ವಜನಿಕ ಹುದ್ದೆಗಳನ್ನು ಹೊಂದಿರುವ ಸದಸ್ಯರು ಸಾರ್ವಜನಿಕ ಸಂಪನ್ಮೂಲಗಳನ್ನು ಸಾರ್ವಜನಿಕ ಒಳಿತಿಗೆ ಕಾರಣವಾಗುವ ರೀತಿಯಲ್ಲಿ ಬಳಸಬೇಕು.
- ಸದಸ್ಯರು ಯಾವಾಗಲೂ ತಮ್ಮ ಖಾಸಗಿ ಆರ್ಥಿಕ ಹಿತಾಸಕ್ತಿಗಳು ಮತ್ತು ತಮ್ಮ ಹತ್ತಿರದ ಕುಟುಂಬದ ಸದಸ್ಯರ ಹಿತಾಸಕ್ತಿಗಳು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಸಂಘರ್ಷಕ್ಕೆ ಬರದಂತೆ ನೋಡಿಕೊಳ್ಳಬೇಕು ಮತ್ತು ಅಂತಹ ಯಾವುದೇ ಹಿತಾಸಕ್ತಿ ಸಂಘರ್ಷ ಉದ್ಭವಿಸಿದರೆ, ಅವರು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಅಂಥ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸಬೇಕು.
- ಸದಸ್ಯರು ಸದನದಲ್ಲಿ ಮಸೂದೆಯನ್ನು ಮಂಡಿಸಲು, ನಿರ್ಣಯ ಮಂಡಿಸಲು, ಪ್ರಶ್ನೆ ಕೇಳಲು ಅಥವಾ ಪ್ರಶ್ನೆ ಕೇಳದಿರಲು ಅಥವಾ ಸದನ ಅಥವಾ ಸಂಸದೀಯ ಸಮಿತಿಯ ಚರ್ಚೆಗಳಲ್ಲಿ ಭಾಗವಹಿಸದಿರಲು ನೀಡಿದ ಅಥವಾ ನೀಡದ ಮತಕ್ಕೆ ಯಾವುದೇ ಶುಲ್ಕ, ಸಂಭಾವನೆ ಅಥವಾ ಪ್ರಯೋಜನವನ್ನು ಎಂದಿಗೂ ನಿರೀಕ್ಷಿಸಬಾರದು ಅಥವಾ ಸ್ವೀಕರಿಸಬಾರದು.
ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಯ ಹಿತಾಸಕ್ತಿಗಳಿಗಾಗಿ ಸದನದಲ್ಲಿ ಪ್ರಶ್ನೆ ಕೇಳಲು ಭಾರತದ ಸಂಸತ್ ಸದಸ್ಯರೊಬ್ಬರು ಉಡುಗೊರೆ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವುದು ಇದೇ ಮೊದಲಲ್ಲ. ಸದಸ್ಯರಾಗಿ ತಮ್ಮ ಕಚೇರಿಯ ನಿರ್ವಹಣೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸದಸ್ಯರ ನಡವಳಿಕೆಯನ್ನು ಸದನವು ಹಕ್ಕುಚ್ಯುತಿ ಎಂದು ಪರಿಗಣಿಸುತ್ತದೆ. ಸದನದಲ್ಲಿ ಅಂತಹ ವ್ಯಕ್ತಿಯ ಹಕ್ಕುಗಳನ್ನು ಸಮರ್ಥಿಸಲು ಹಣದ ಮೊತ್ತಕ್ಕಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸದಸ್ಯನ ಕಡೆಯಿಂದ ಹಕ್ಕುಚ್ಯುತಿ ಅಥವಾ ದುರ್ನಡತೆಯಾಗುತ್ತದೆ.
1951ರಲ್ಲಿಯೇ ಸಂಸ್ಥೆಯೊಂದರ ಪರವಾಗಿ ಎಚ್.ಜಿ. ಮುದ್ಗಲ್ ಅವರ ನಡವಳಿಕೆ ಮತ್ತು ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಸದನದ ತಾತ್ಕಾಲಿಕ ಸಮಿತಿಯನ್ನು ನೇಮಿಸಿತ್ತು. ಆ ಸಂಸ್ಥೆಯ ಪರವಾಗಿ ಕೆಲ ಸಮಸ್ಯೆಗಳ ಬಗ್ಗೆ ಅವರು ಸಂಸತ್ತಿನಲ್ಲಿ ಪ್ರಚಾರ ಮಾಡುತ್ತಿದ್ದರು. ಸದಸ್ಯರ ನಡವಳಿಕೆಯು ಸದನದ ಘನತೆಗೆ ಅವಮಾನಕರವಾಗಿದೆ ಮತ್ತು ಸಂಸತ್ತು ತನ್ನ ಸದಸ್ಯರಿಂದ ನಿರೀಕ್ಷಿಸಲು ಅರ್ಹವಾದ ಮಾನದಂಡಗಳಿಗೆ ಅಸಮಂಜಸವಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು. ನಂತರ ಸಮಿತಿಯು ಆ ಸಂಸದರನ್ನು ಸದನದಿಂದ ಹೊರಹಾಕಲು ಶಿಫಾರಸು ಮಾಡಿತ್ತು. ಆಗ ಆ ಸಂಸದರು ಸದನದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದಾದ ನಂತರ ಸದನವು ಅವರ ರಾಜೀನಾಮೆಯನ್ನು ತಿರಸ್ಕರಿಸಿತ್ತು. ರಾಜೀನಾಮೆ ನೀಡುವ ಮೂಲಕ ಅವರು ಸದನದಿಂದ ವಜಾಗೊಳಿಸಲ್ಪಡುವ ಶಿಕ್ಷೆಯಿಂದ ಪಾರಾಗಲು ಹೀಗೆ ಮಾಡಿದ್ದರು ಎಂದು ಸದನ ನಿರ್ಣಯ ಅಂಗೀಕರಿಸಿತ್ತು.
2005ರ ಡಿಸೆಂಬರ್ 12ರಂದು ಖಾಸಗಿ ಟೆಲಿವಿಷನ್ ಚಾನೆಲ್ ಒಂದು, ಕೆಲ ಸಂಸತ್ ಸದಸ್ಯರು ಪ್ರಶ್ನೆಗಳನ್ನು ಮಂಡಿಸಲು ಮತ್ತು ಸದನದಲ್ಲಿ ಇತರ ವಿಷಯಗಳನ್ನು ಎತ್ತಲು ಹಣ ಸ್ವೀಕರಿಸುತ್ತಿರುವ ವೀಡಿಯೊ ತುಣುಕನ್ನು ತನ್ನ ಸುದ್ದಿ ಬುಲೆಟಿನ್ ನಲ್ಲಿ ಪ್ರಸಾರ ಮಾಡಿತ್ತು. ಇದು ಬಹಳ ದೊಡ್ಡ ಸುದ್ದಿಯಾಗಿತ್ತು. ಅದೇ ದಿನ ಸ್ಪೀಕರ್ ಅವರು ಈ ವಿಷಯವನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವವರೆಗೆ ಸದನದ ಅಧಿವೇಶನಕ್ಕೆ ಹಾಜರಾಗದಂತೆ ಸಂಬಂಧಪಟ್ಟ ಸಂಸದರಿಗೆ ಸೂಚಿಸಿದ್ದರು. ಇದಕ್ಕಾಗಿ ವಿಚಾರಣಾ ಸಮಿತಿಯನ್ನು ನೇಮಿಸಿ 21 ಡಿಸೆಂಬರ್ 2005 ರೊಳಗೆ ತನ್ನ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಯಿತು. ಸಮಿತಿಯ ವರದಿಯನ್ನು 23 ಡಿಸೆಂಬರ್ 2005 ರಂದು ಉಭಯ ಸದನಗಳು ಅಂಗೀಕರಿಸಿ 11 ಸದಸ್ಯರನ್ನು (ಲೋಕಸಭೆಯ 10 ಮತ್ತು ರಾಜ್ಯಸಭೆಯ ಒಬ್ಬರು) ಸಂಸತ್ತಿನ ಸದಸ್ಯತ್ವದಿಂದ ಹೊರಹಾಕಿದವು.
ಸಂಸದರ ಅನರ್ಹತೆ ಮತ್ತು ಹೊರಹಾಕುವಿಕೆ ಎಂಬ ಪದಗಳನ್ನು ಕೆಲವೊಮ್ಮೆ ಮಾಧ್ಯಮಗಳು ಪರಸ್ಪರ ಬದಲಾಯಿಸಿ ವರದಿ ಮಾಡಿವೆ. ಆದಾಗ್ಯೂ ಶಾಸಕಾಂಗದ ಸದಸ್ಯರ ಸಂದರ್ಭದಲ್ಲಿ ಈ ಪದಗಳು ವಿಭಿನ್ನ ಅರ್ಥವನ್ನು ಹೊಂದಿವೆ. ತಪ್ಪಿತಸ್ಥರೆಂದು ಸಾಬೀತಾದ ನಂತರ ಅಥವಾ ಪಕ್ಷಾಂತರದ ಆಧಾರದ ಮೇಲೆ ಸಂಸತ್ ಸದಸ್ಯರನ್ನು ಅನರ್ಹಗೊಳಿಸಿದರೆ, ಅವರು ಆರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗುತ್ತದೆ. ಈ ಹಿಂದೆ ಅನರ್ಹಗೊಂಡ ಸಂಸದರಲ್ಲಿ ಜೆ.ಜಯಲಲಿತಾ ಮತ್ತು ಲಾಲು ಪ್ರಸಾದ್ ಯಾದವ್ ಮತ್ತು ಇತ್ತೀಚೆಗೆ ಪಿ.ಪಿ.ಮೊಹಮ್ಮದ್ ಫೈಜಲ್ ಮತ್ತು ರಾಹುಲ್ ಗಾಂಧಿ (ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದೆ) ಸೇರಿದ್ದಾರೆ.
ಆದಾಗ್ಯೂ, ಸಂಸದರೊಬ್ಬರನ್ನು ಸಂಸತ್ತಿನಿಂದ ಹೊರಹಾಕಿದ ನಂತರ ಅವರ ಮೇಲೆ ಅಂಥ ಯಾವುದೇ ನಿಷೇಧಗಳಿರುವುದಿಲ್ಲ. ಎರಡೂ ಪ್ರಕರಣಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಚುನಾವಣಾ ಆಯೋಗವು ಆರು ತಿಂಗಳೊಳಗೆ ಭರ್ತಿ ಮಾಡಬೇಕಾಗುತ್ತದೆ. ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಮೊಯಿತ್ರಾ ಅವರ ಉಚ್ಛಾಟನೆಯಿಂದ ಉಂಟಾದ ಖಾಲಿ ಸ್ಥಾನವನ್ನು ತುಂಬಲು ಯಾವುದೇ ಉಪಚುನಾವಣೆ ನಡೆಯುವುದಿಲ್ಲ. ಅವರು ಅನರ್ಹರಾಗದ ಕಾರಣ 2024 ರಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಮುಕ್ತರಾಗಿರುತ್ತಾರೆ.
(ಲೇಖನ: ವಿವೇಕ್ ಕೆ. ಅಗ್ನಿಹೋತ್ರಿ, ಐಎಎಸ್ (ನಿವೃತ್ತ), ಮಾಜಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ಭಾರತದ ಸಂಸತ್ತು)
ಇದನ್ನೂ ಓದಿ: ಕುಟುಂಬಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್: ವಿಡಿಯೋ