ಧನ್ಬಾದ್ (ಜಾರ್ಖಂಡ್): ಬುಧವಾರ ಬೆಳಗ್ಗೆ ಆಟೋ ಡಿಕ್ಕಿ ಹೊಡೆದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಮೃತಪಟ್ಟಿದ್ದಾರೆ. ಈ ಸಂಬಂಧ ಇಂದು ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಬಿಐ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಒತ್ತಾಯಿಸಿದೆ.
ಅಲ್ಲದೆ, ಈ ವಿಚಾರವನ್ನು ವಕೀಲ ವಿಕಾಸ್ ಸಿಂಗ್ ಸುಪ್ರೀಂಕೋರ್ಟ್ನಲ್ಲಿ ಪ್ರಸ್ತಾಪಿಸಿದ್ದು, ಈ ಪ್ರಕರಣವನ್ನು ಜಾರ್ಖಂಡ್ ಹೈಕೋರ್ಟ್ ವಿಚಾರಣೆ ನಡೆಸಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರವಿ ರಂಜನ್, ಈ ಸಾವಿನ ಬಗ್ಗೆ ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಕುಟುಂಬ ಸದಸ್ಯರು ಮತ್ತು ಇತರೆ ನ್ಯಾಯಾಧೀಶರು ಜಾರ್ಖಂಡ್ ಡಿಐಜಿ ಭೇಟಿ ಮಾಡಿದ್ದು, ಇದು ಅಪಘಾತವಲ್ಲ, ಉದ್ದೇಶಪೂರ್ವಕ ಹತ್ಯೆ ಎಂದು ಹೇಳಿದ್ದಾರೆ.
ಆನಂದ್ ರಣಧೀರ್ ವರ್ಮಾ, ಅವರ ನಿವಾಸದಿಂದ ಗಾಲ್ಫ್ ಮೈದಾನದತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಕಿಂಗ್ಗೆ ಹೋಗಿ ಎಷ್ಟೊತ್ತಾದರೂ ಮನೆಗೆ ಬಾರದ ಹಿನ್ನೆಲೆ, ಕುಟುಂಬಸ್ಥರು ಹುಡುಕಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮಾಜಿ ಶಾಸಕ ಸಂಜೀವ್ ಸಿಂಗ್ ಆಪ್ತರಾಗಿದ್ದ ಮಾಫಿಯಾ ರಂಜಯ್ ಸಿಂಗ್ ಅವರ ಕೊಲೆ ಪ್ರಕರಣವನ್ನು ನ್ಯಾ. ಆನಂದ್ ವಿಚಾರಣೆ ನಡೆಸುತ್ತಿದ್ದರು. ವರದಿಗಳ ಪ್ರಕಾರ ಈ ಪ್ರಕರಣ ಸಂಬಂಧ ಆರೋಪಿಗಳಾದ ಅಭಿನವ್ ಸಿಂಗ್ ಮತ್ತು ರವಿ ಠಾಕೂರ್ ಅವರ ಜಾಮೀನು ಅರ್ಜಿಯನ್ನು ಆನಂದ್ ವಜಾಗೊಳಿಸಿದ್ದರು. ಈ ಬೆನ್ನಲ್ಲೇ ಈ ಅಪಘಾತ ನಡೆದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ನಕಲಿ ಕೀ ಬಳಸಿ ನಿರ್ಮಾಪಕನ ಮನೆಗೆ ಕನ್ನ: ಆರೋಪಿಗಳನ್ನು ಬಂಧಿಸಿದ ಪೊಲೀಸರು
ನ್ಯಾಯಮೂರ್ತಿ ಆನಂದ್ ಅವರನ್ನು ಆರು ತಿಂಗಳ ಹಿಂದೆ ಧನ್ಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಈ ಹಿಂದೆ ಅವರು ಬೊಕಾರೊದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದರು.