ನವೀ ಮುಂಬೈ: ದೇಶಾದ್ಯಂತ ನಿನ್ನೆ ರಾತ್ರಿ ಸಡಗರ-ಸಂಭ್ರಮದಿಂದ ಗಣೇಶ ಮೂರ್ತಿಗಳ ನಿಮಜ್ಜನ ಕಾರ್ಯ ನಡೆದಿದೆ. ಈ ವೇಳೆ ಕೆಲವೊಂದು ರಾಜ್ಯಗಳಲ್ಲಿ ಅಹಿತಕರ ಘಟನೆ ಸಹ ನಡೆದಿರುವುದು ವರದಿಯಾಗಿದೆ. ನವೀ ಮುಂಬೈನ ಪನ್ವೇಲ್ನಲ್ಲಿ ಗಣೇಶ ಮೂರ್ತಿ ನಿಮಜ್ಜನ ವೇಳೆ ಜನರೇಟರ್ ತಂತಿ ತುಂಡಾಗಿ 11 ಭಕ್ತರಿಗೆ ವಿದ್ಯುತ್ ಶಾಕ್ ಹೊಡೆದಿದೆ.
ತೀವ್ರ ವಿದ್ಯುತ್ ಸ್ಪರ್ಶಕ್ಕೊಳಗಾಗಿರುವ ಇವರೆಲ್ಲರನ್ನೂ ಆರಂಭದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರಲ್ಲಿ ಕೆಲವರ ಸ್ಥಿತಿ ತೀರಾ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಪಟವರ್ಧನ್ ಹಾಗೂ ಲೈಫ್ಲೈನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ದುರಂತ: ಪ್ರತ್ಯೇಕ ಘಟನೆಯಲ್ಲಿ 7 ಜನರ ಸಾವು
ನಿನ್ನೆ ಸಂಜೆ 7:30ರ ವೇಳೆ ಈ ಘಟನೆ ಸಂಭವಿಸಿದೆ. ವಿದ್ಯುತ್ ಶಾಕ್ಗೊಳಗಾದವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮನೆಯಲ್ಲಿ ಸ್ಥಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯ ನಿಮಜ್ಜನ ಮಾಡಲು ಎಲ್ಲರೂ ಒಟ್ಟಿಗೆ ತೆರಳುತ್ತಿದ್ದರು. ಈ ವೇಳೆ ವಡ್ಘರ್ ನದಿ ಪಕ್ಕದಲ್ಲಿ ತುಂಡಾದ ಜನರೇಟರ್ ತಂತಿ ಇವರ ಮೇಲೆ ಬಿದ್ದಿದೆ. ಹೀಗಾಗಿ, ಎಲ್ಲರೂ ಗಾಯಗೊಂಡಿದ್ದಾರೆ. ಈಗಾಗಲೇ ಇಬ್ಬರು ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್ ಆಗಿದ್ದಾರೆ.
ಇನ್ನೂ ಹರಿಯಾಣದ ವಿವಿಧ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ವೇಳೆ 7 ಜನರು ದುರ್ಮರಣಕ್ಕೀಡಾಗಿರುವ ಘಟನೆ ಸಹ ನಡೆದಿದೆ.