ಮುಂಬೈ: ರಾಜ್ಯದಲ್ಲಿ ಮರಾಠಿಗರ ಮೀಸಲಾತಿ ಪ್ರತಿಭಟನೆಯ ಸ್ವರೂಪವೇ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಿಂಸಚಾರ ಹೊಸ ತಿರುವು ಪಡೆದುಕೊಂಡಿದೆ. ಮರಾಠಾ ಆಂದೋಲನವನ್ನು ನಿಯಂತ್ರಿಸುವಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಸೋತು ಹೋಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಹರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಅವರ ದೆಹಲಿಯ ನಿವಾಸದಲ್ಲಿ ಇಂದು ಭೇಟಿಯಾಗಿ ಚರ್ಚಿಸಲಿದ್ದಾರೆ.
ಈಗಾಗಲೇ ಮೀಸಲಾತಿ ಪರಿಹಾರಕ್ಕಾಗಿ ಮರಾಠ ಮುಖಂಡರೊಂದಿಗೆ ಸಭೆ, ಸರ್ವಪಕ್ಷ ಸಭೆ, ಸಚಿವ ಸಂಪುಟ ಉಪಸಮಿತಿಯ ವಿಶೇಷ ಸಭೆಗಳನ್ನು ನಡೆಸಲಾಗಿದೆ. ಆದರೆ, ಏನೂ ಪರಿಣಾಮ ಬೀರದೇ ಇರುವುದರಿಂದ ಮರಾಠರು ತಮ್ಮ ಮೀಸಲಾತಿಗಾಗಿ ಹಠ ಹಿಡಿದಿದ್ದಾರೆ. ಹಿಂಸಾಚಾರದಲ್ಲಿ ತೊಡಗಿರುವ ಮರಾಠ ಹೋರಾಟಗಾರರು, ಹಲವೆಡೆ ಬೆಂಕಿ ಹಚ್ಚುವುದು, ಧ್ವಂಸ ಮಾಡುವುದು ಸೇರಿ ರಸ್ತೆ ತಡೆ ಮುಂದುವರಿಸಿದ್ದಾರೆ. ಮುಖ್ಯಮಂತ್ರಿಯಾಗಲಿ, ಗೃಹಸಚಿವರು ಎಷ್ಟೇ ಮನವಿ ಮಾಡಿದರೂ ಇವ್ಯಾರಾರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿದೆ. ಇದೆಲ್ಲವುಗಳಿಂದ ದಿಕ್ಕು ತೋಚದಾಗಿರುವ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅಮಿತ್ ಶಾರನ್ನು ಭೇಟಿಯಾಗುತ್ತಿದ್ದಾರೆ.
ನಿನ್ನೆಯೇ ದೇವೇಂದ್ರ ಫಡ್ನವೀಸ್, ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಗಾಗಿ ದೆಹಲಿಗೆ ಆಗಮಿಸಿದ್ದರು. ಸಭೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಿತು. ಈ ಸಭೆಯ ನಂತರವೂ ದೇವೇಂದ್ರ ಫಡ್ನವೀಸ್ ದೆಹಲಿಯಲ್ಲಿದ್ದಾರೆ. ರಾಜ್ಯದಲ್ಲಿ ಮರಾಠಿ ಚಳವಳಿಯನ್ನು ಶಮನಗೊಳಿಸಲು ಸರ್ಕಾರದ ಎಲ್ಲ ಪ್ರಯತ್ನ ವಿಫಲಗೊಳ್ಳುತ್ತಿವೆ. ಈ ಹಿಂಸಾಚಾರದಲ್ಲಿ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ನಿಯಂತ್ರಣಕ್ಕೆ ಸಿಗದ ಹೋರಾಟಕ್ಕೆ ಕೇಂದ್ರ ಗೃಹ ಸಚಿವಾಲಯ ಜಾತಿ ಆಧಾರದಲ್ಲಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಫಡ್ನವೀಸ್ ಅವರು ಅಮಿತ್ ಶಾ ಅವರಿಗೆ ಬೇಡಿಕೆ ಇಡಲಿದ್ದಾರೆ. ಮೀಸಲಾತಿ ಹೋರಾಟದಲ್ಲಿ ಈವರೆಗೆ 168 ಮಂದಿಯನ್ನು ಬಂಧಿಸಲಾಗಿದೆ. ಸೆಕ್ಷನ್ 307 ರ ಅಡಿ ಹಲವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ನಾಯಕರ ಭೇಟಿಯ ನಂತರ, ಮರಾಠ ಮೀಸಲಾತಿಗಾಗಿ ಕೇಂದ್ರ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಮರಾಠ ಮೀಸಲಾತಿಗೆ ಸರ್ವಪಕ್ಷಗಳ ಸರ್ವಾನುಮತದ ಬೆಂಬಲ; ಆದರೂ, ಸಮಯಾವಕಾಶ - 'ಮಹಾ' ಸಿಎಂ ಶಿಂಧೆ