ಮುಂಬೈ (ಮಹಾರಾಷ್ಟ್ರ): ಇಂದು ಸದನದ ವಿಶೇಷ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಸಚಿವರು ಗೈರು ಹಾಜರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಹಾರಾಷ್ಟ್ರ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಗೈರು ಹಾಜರಿಯಿಂದಾಗಿ ಜನರ ಸಮಸ್ಯೆಗಳ ಕುರಿತು ಚರ್ಚೆಗೆ ನಾವು ನೀಡಿದ ಎಂಟು ನೋಟಿಸ್ಗಳ ಪೈಕಿ ಏಳು ನೋಟಿಸ್‌ಗಳನ್ನು ಮುಂದೂಡುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರುಗಳ ಗೈರಿಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕ್ಷಮೆಯಾಚಿಸಿದ ಪ್ರಸಂಗ ನಡೆಯಿತು.
ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಯವನ್ನು ಸಚಿವರ ಗಮನಕ್ಕೆ ತರಲು ಸದನದ ಸದಸ್ಯರಿಗೆ ಗಮನ ಸೆಳೆಯುವ ಸೂಚನೆಯ ಅವಕಾಶವನ್ನು ಸದನ ನೀಡುತ್ತದೆ. ಬಜೆಟ್ ಅಧಿವೇಶನ ನಡೆಯುತ್ತಿರುವ ವಿಧಾನಸಭೆಯಲ್ಲಿ ಇಂದು ತನ್ನ ಕಲಾಪದ ನಂತರ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲಾಯಿತು. ಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡ ಕೂಡಲೇ ಗರಂ ಆದ ಅಜಿತ್ ಪವಾರ್, ಇಂದಿನ ವಿಶೇಷ ಸಭೆಯಲ್ಲಿ 8 ಗಮನ ಸೆಳೆಯುವ ನೋಟಿಸ್‌ಗಳನ್ನು ಪಟ್ಟಿ ಮಾಡಲಾಗಿದೆ. ಆದರೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಒಂದನ್ನು ಮಾತ್ರ ಚರ್ಚೆಗೆ ತೆಗೆದುಕೊಳ್ಳಬಹುದು. ಏಕೆಂದರೆ ಸಂಬಂಧಪಟ್ಟ ಸಚಿವರು ಮಾತ್ರ ಇಲ್ಲಿ ಹಾಜರಿದ್ದಾರೆ. ಇತರೆ ಸಚಿವರು ಗೈರು ಹಾಜರಾಗಿದ್ದರಿಂದ ಉಳಿದೆಲ್ಲವುಗಳನ್ನು ಮುಂದೂಡಬೇಕಾಯಿತು ಎಂದರು.
ಇಂದು ಮತ್ತೊಮ್ಮೆ ಸದನದಲ್ಲಿ ಸಚಿವರ ಗೈರುಹಾಜರಿಯ ವಿಚಾರವನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಅಜಿತ್ ಪವಾರ್, ಶಾಸಕಾಂಗ ಸಭೆಯಲ್ಲಿ ವಿವಿಧ ಆಯೋಗಗಳ ಮೂಲಕ ಸಾಮಾನ್ಯ ನಾಗರಿಕರ ಸಮಸ್ಯೆಗಳನ್ನು ಎತ್ತಲು ಎಟೆನ್ಷನ್ ಬಹಳ ಮುಖ್ಯವಾದ ಅಸ್ತ್ರವಾಗಿದೆ. ಆದರೆ ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಭಾಂಗಣದಲ್ಲಿ ಸಚಿವರೇ ಇಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಅವರ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಜಿತ್ ಪವಾರ್, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸಚಿವರು ಉದಾಸೀನ ಧೋರಣೆ ತಾಳಿದ್ದು, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಚರ್ಚಿಸಲು ಸಮಯವಿಲ್ಲದಿದ್ದರೆ ಅಂತಹ ಸಚಿವರು ಸಂಪುಟದಿಂದ ಹೊರ ನಡೆಯಲಿ ಎಂದು ಆಗ್ರಹಿಸಿದರು. ವಿಪಕ್ಷ ನಾಯಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವೀಸ್, ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಸಕಾಂಗದಲ್ಲಿ ಕೈಗೆತ್ತಿಕೊಂಡಾಗ ಎಲ್ಲ ಸಚಿವರು ಹಾಜರಿರಲು ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಜನರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವಾಗ ಸಚಿವರು ಗೈರುಹಾಜರಾಗಿ ಚರ್ಚೆ ಮುಂದೂಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಸಚಿವರುಗಳಿಗೆ ಅರ್ಥವಾಗದಿದ್ದಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಚಿವರು ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭರವಸೆ ನೀಡಿದ ಹಲವು ಸಭೆಗಳು ನಡೆಯುತ್ತಿಲ್ಲ ಎಂದು ಬೊಟ್ಟು ಮಾಡಿ ಹೇಳಿದ ಅಜಿತ್ ಪವಾರ್, ಸರ್ಕಾರ ಅತ್ಯಂತ ನಿರಾಸಕ್ತಿಯಿಂದ ಕೆಲಸ ಮಾಡುತ್ತಿರುವ ಬಗ್ಗೆ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಲಾಪದಲ್ಲಿ ಗದ್ದಲ: ಕಾಂಗ್ರೆಸ್ನ ಎಲ್ಲಾ ಶಾಸಕರನ್ನು ಅಮಾನತುಗೊಳಿಸಿದ ಸ್ಪೀಕರ್