ಕೋಲ್ಕತ್ತಾ (ಪಶ್ಚಿಮ ಬಂಗಾಳ): ಖಿನ್ನತೆಗೆ ಒಳಗಾದ ರೋಗಿಯೊಬ್ಬ ಆಸ್ಪತ್ರೆಯ ಎಂಟನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಸೆಂಟ್ರಲ್ ಕೋಲ್ಕತ್ತಾದಲ್ಲಿ ನಡೆದಿದೆ. ಅಲ್ಲದೇ, ಇದಕ್ಕೂ ಮುನ್ನ ಮಹಡಿ ಮೇಲೆ ಕುಳಿತು ಆತಂಕವನ್ನೂ ರೋಗಿ ಸೃಷ್ಟಿಸಿದ್ದ.
ಇಲ್ಲಿನ ಮುಲ್ಲಿಕ್ ಬಜಾರ್ ಕ್ರಾಸ್ನಲ್ಲಿರುವ ನರವಿಜ್ಞಾನಗಳ ಸಂಸ್ಥೆ ಮತ್ತು ಆಸ್ಪತ್ರೆಗೆ ಸುಜಿತ್ ಅಧಿಕಾರಿ ಎಂಬ ರೋಗಿ ದಾಖಲಾಗಿದ್ದ. ಆದರೆ, ಈ ವೇಳೆ ಆತ ವಾರ್ಡ್ ಬಾಯ್‌ಗಳೊಂದಿಗೆ ಜಗಳವಾಡಿದ್ದಾನೆ. ನಂತರ ಆಸ್ಪತ್ರೆಯ ಎಂಟನೇ ಮಹಡಿಯ ಕಿಟಕಿಯಿಂದ ಜಾರಿಬಿದ್ದು, ಅಲ್ಲಿದ್ದ ಗೋಡೆಯ ತುದಿಗೆ ಬಂದು ಕುಳಿತಿದ್ದಾನೆ. ಇದರಿಂದ ಆಘಾತಗೊಂಡ ಆಸ್ಪತ್ರೆ ಸಿಬ್ಬಂದಿ ಮೇಲೆ ಏರುವಂತೆ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸತತ 2 ಗಂಟೆಯ ಯತ್ನ ವಿಫಲ: ಎಂಟನೇ ಮಹಡಿಯ ತುದಿಗೆ ಕುಳಿತು ಅಲ್ಲಿ ಮನಸ್ಸಿಗೆ ಬಂದಂತೆ ಈ ರೋಗಿ ವರ್ತಿಸಲು ಶುರು ಮಾಡಿದ್ದಾನೆ. ಆದ್ದರಿಂದ ಆಸ್ಪತ್ರೆಯವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೈಡ್ರಾಲಿಕ್ ಏಣಿಯೊಂದಿಗೆ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಅಗ್ನಿಶಾಮಕ ದಳದವರು ಆತನ ಬಳಿಗೆ ಹೋದಾಗಲೆಲ್ಲ ಅಲ್ಲಿಂದ ಜಿಗಿಯುವ ಬೆದರಿಕೆ ಹಾಕಿದ್ದ. ಇತ್ತ, ಕುಟುಂಬಸ್ಥರು ಹೇಳಿದರೂ ಕೂಡ ಕೇಳದೇ ಇದೇ ರೀತಿಯಾಗಿ ವರ್ತಿಸಿದ್ದಾನೆ.
ಆತ ಎಲ್ಲೂ ಕದಲಬಾರದು ಎಂದು ರೋಗಿ ಕುಳಿತಿರುವಲ್ಲಿಗೆ ತಂಪು ಪಾನೀಯಗಳು ಮತ್ತು ಆಹಾರವನ್ನು ನಿರಂತರವಾಗಿ ಸರಬರಾಜು ಮಾಡಲಾಗಿದೆ. ಈ ಮಧ್ಯೆ, ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ (ಎಸ್ಡಿಆರ್ಎಫ್) ಕೂಡ ರಕ್ಷಣಾ ನೆಟ್‌ಗಳು ಮತ್ತು ಏರ್‌ಬ್ಯಾಗ್‌ಗಳೊಂದಿಗೆ ಸ್ಥಳಕ್ಕೆ ಬಂದಿದ್ದಾರೆ. ನೆಟ್‌ಗಳು ಮತ್ತು ಏರ್‌ಬ್ಯಾಗ್‌ಗಳನ್ನು ಕಟ್ಟಿದರೆ ಆತ ಮೇಲಿಂದ ಜಿಗಿದರೂ ಪ್ರಾಣ ಉಳಿಸಬಹುದು ಎಂದು ಉಪಾಯ ಮಾಡಿದ್ದರು.
ಆದರೆ, ರಕ್ಷಣಾ ನೆಟ್‌ಗಳನ್ನು ಅಳವಡಿಸಲು ಮತ್ತು ಏರ್‌ಬ್ಯಾಗ್‌ಗಳನ್ನು ಹಾಕಲು ಸಿದ್ಧವಾಗುತ್ತಿದ್ದಂತೆ ರೋಗಿ ಗೋಡೆಗೆ ನೇತಾಡಲು ಪ್ರಾರಂಭಿಸಿ ಕೊನೆಗೆ ಜಿಗಿದಿದ್ದಾನೆ. ಪರಿಣಾಮ ಕೆಳಗೆ ಬೀಳುತ್ತಿದ್ದಾಗ ದೇಹವು ಕಟ್ಟಡದ ಗೋಡೆಗೆ ಎರಡು ಬಾರಿ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗಳಾಗಿ ತೀವ್ರ ರಕ್ತಸ್ರಾವವಾಗಿದೆ. ಸದ್ಯ ಆತನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತಕ್ಷಣ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Maharashtra political crisis.. 16 ಜನ ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್