ತಿರುವನಂತಪುರಂ: ಅರೆನಗ್ನವಾಗಿದ್ದ ಪುರುಷ ದೇಹ ಪ್ರಶ್ನೆಗೆ ಒಳಗಾಗಲ್ಲ, ಹಾಗಿದ್ದಲ್ಲಿ ಮಹಿಳೆಯ ದೇಹ ಅರೆ ನಗ್ನವಾಗಿದ್ದರೆ ಅದನ್ನು ಲೈಂಗಿಕ ಪ್ರಚೋದನೆ ಅಥವಾ ಅಶ್ಲೀಲವೆಂದು ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ತನ್ನ ಮಕ್ಕಳು ಅರೆ ನಗ್ನ ದೇಹದ ಮೇಲೆ ಚಿತ್ರ ಬಿಡಿಸುವ ವಿಡಿಯೋ ಮಾಡಿದ್ದ ಹೋರಾಟಗಾರ್ತಿ ರೆಹನಾ ಫಾತಿಮಾ ವಿರುದ್ಧ ದಾಖಲಾಗಿದ್ದ ಕೇಸ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಮಹಿಳೆಯ ಬೆತ್ತಲೆ ದೇಹವನ್ನು ಯಾವಾಗಲೂ ಲೈಂಗಿಕ ಅಥವಾ ಅಶ್ಲೀಲ ಎಂದು ಪರಿಗಣಿಸಬಾರದು. ಎಲ್ಲರಿಗೂ ದೇಹದ ಸ್ವಾಯತ್ತತೆ ಇದೆ. ಪುರುಷ ದೇಹದ ಸ್ವಾತಂತ್ರ್ಯವನ್ನು ವಿರಳವಾಗಿ ಪ್ರಶ್ನಿಸಲಾಗುತ್ತದೆ. ಆದರೆ, ಮಹಿಳೆಯರು ನಗ್ನವಾಗಿ ಕಂಡಲ್ಲಿ ಪಿತೃಪ್ರಧಾನ ಸಮಾಜದ ನಿರಂತರ ಬೆದರಿಕೆಗೆ ಒಳಗಾಗುತ್ತಾರೆ. ಮಹಿಳೆಯರೂ ಕೂಡ ತಮ್ಮ ದೇಹ ಮತ್ತು ಜೀವನದ ಆಯ್ಕೆಗಳನ್ನು ಹೊಂದಿದ್ದಾರೆ. ಆದಾಗ್ಯೂ ಅವರು ತಾರತಮ್ಯ, ಪ್ರತ್ಯೇಕತೆ ಮತ್ತು ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂದು ಕೋರ್ಟ್ ಹೇಳಿದೆ.
ಕೇರಳದ ಮಹಿಳೆ ತನ್ನ ದೇಹದ ಮೇಲೆ ತನ್ನ ಮಕ್ಕಳಿಗೆ ಬಣ್ಣದ ಚಿತ್ತಾರ ಬಿಡಿಸಲು ಅನುಮತಿಸಿದ್ದಲ್ಲಿ ಯಾವುದೇ ಅಶ್ಲೀಲತೆ, ಲೈಂಗಿಕತೆ ಕಾಣುತ್ತಿಲ್ಲ. ತಾಯಿಯ ದೇಹದ ಮೇಲೆ ಮಕ್ಕಳು ಚಿತ್ರಿಸಿದರೆ, ಲೈಂಗಿಕ ಕ್ರಿಯೆಯ ಭಾಗ ಎಂದು ನಿರೂಪಿಸಲಾಗುವುದಿಲ್ಲ ಅಥವಾ ಲೈಂಗಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ದೇಹ ಕ್ಯಾನ್ವಾಸ್ನಂತೆ ಬಳಕೆ: ಪುರುಷ ಮತ್ತು ಮಹಿಳೆಯ ದೇಹದ ಬಗೆಗಿನ ಸಮಾಜದ ದ್ವಂದ್ವ ನಿಲುವನ್ನು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಗಮನಿಸಿತು. ತಾಯಿಯು ತನ್ನ ಮಕ್ಕಳಿಗೆ ತನ್ನ ದೇಹವನ್ನು ಚಿತ್ರಿಸಲು ಕ್ಯಾನ್ವಾಸ್ನಂತೆ ಬಳಸಲು ಅನುಮತಿಸಿದರೆ ತಪ್ಪೇನೂ ಇಲ್ಲ ಎಂದಿದೆ.
ಈ ಮುಗ್ಧ ಕಲಾತ್ಮಕ ಅಭಿವ್ಯಕ್ತಿತ್ವವನ್ನು 'ಸಿಮ್ಯುಲೇಟೆಡ್ ಲೈಂಗಿಕ ಕ್ರಿಯೆಯಲ್ಲಿ ಮಗುವಿನ ಬಳಕೆ' ಎಂದು ಕರೆಯುವುದು ಕಷ್ಟ. ಮಕ್ಕಳನ್ನು ಅಶ್ಲೀಲವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಲೂ ಸಾಧ್ಯವಿಲ್ಲ. ದೃಶ್ಯಗಳಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ಅರ್ಜಿದಾರರು ಮಹಿಳೆಯ ಅರೆನಗ್ನ ದೇಹವನ್ನು ರಾಜಕೀಯ ರೂಪದಲ್ಲಿ ಪ್ರಶ್ನಿಸಲಾಗಿದೆ ಎಂದು ನ್ಯಾಯಮೂರ್ತಿ ಎಡಪ್ಪಗತ್ ತೀರ್ಪು ವೇಳೆ ಹೇಳಿದ್ದಾರೆ.
ಮಹಿಳೆಯ ನಗ್ನ ದೇಹದ ದೃಶ್ಯವು ಪೂರ್ವನಿಯೋಜಿತವಾಗಿ ಲೈಂಗಿಕತೆಯಿಂದ ಕೂಡಿದೆ ಎಂದು ಪರಿಗಣಿಸಬಾರದು. ಹಾಗೆಯೇ, ಬೆತ್ತಲೆ ದೇಹದ ಚಿತ್ರವು ಅಶ್ಲೀಲ, ಅಸಭ್ಯ ಅಥವಾ ಲೈಂಗಿಕ ಹಿನ್ನೆಲೆಯಿಂದ ಕೂಡಿದೆ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ವಿಡಿಯೋವನ್ನು ನೋಡಿದಾಗ ಹೀಗೆಂದು ನಿರ್ಧರಿಸಬಹುದು. ಆದರೆ, ಗಮನಾರ್ಹವಾಗಿ ಇದು ತಪ್ಪು ಎಂದು ಹೇಳಲಾಗದು ಎಂದು ಕೋರ್ಟ್ ತಿಳಿಸಿದೆ.
ಮಹಿಳೆಯ ವಾದವೇನು?: ತನ್ನ ಮಕ್ಕಳಿಂದ ಅರೆ ನಗ್ನ ದೇಹದ ಮೇಲೆ ಚಿತ್ರ ಬಿಡಿಸಿಕೊಂಡು ವಿವಾದಕ್ಕೀಡಾದ ಹೋರಾಟಗಾರ್ತಿ ರೆಹನಾ ಫಾತಿಮಾ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಪಿತೃಪ್ರಧಾನ ಸಮಾಜದ ಕಲ್ಪನೆಗಳನ್ನು ಪ್ರಶ್ನಿಸಲು ಮತ್ತು ಸ್ತ್ರೀ ದೇಹದ ಅತಿಯಾದ ಲೈಂಗಿಕತೆಯ ವಿರುದ್ಧ ಸಂದೇಶವನ್ನು ಹರಡಲು ತಾನು ಈ ವಿಡಿಯೋ ಚಿತ್ರೀಕರಿಸಿದ್ದೇನೆ ಎಂದು ಕೋರ್ಟ್ನಲ್ಲಿ ವಾದಿಸಿದ್ದರು. ಇದಕ್ಕೂ ಮೊದಲು ಇವರು ಶಬರಿಮಲೆ ಪ್ರವೇಶ ಪ್ರಯತ್ನ ಮಾಡಿ ಬಂಧಿತರಾಗಿ ಬಿಡುಗಡೆಯಾಗಿದ್ದರು.
ಇದನ್ನೂ ಓದಿ: ನೈರುತ್ಯ ಮುಂಗಾರು ವಿಳಂಬ: ಜೂನ್ 2ನೇ ವಾರ ರಾಜ್ಯ ಪ್ರವೇಶ ನಿರೀಕ್ಷೆ, ರೈತರ ಆತಂಕ