ನವದೆಹಲಿ: ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಮುಂದಿನ ಐದು ದಿನಗಳ ಕಾಲ ದಟ್ಟ ಮಂಜು ಕವಿದ ವಾತಾವಾರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ಭಾರತದ ಹಲವು ರಾಜ್ಯಗಳು ಸೇರಿದಂತೆ ಪಂಜಾಬ್‌ನ ಮತ್ತು ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕವಿಯಲಿದೆ ಎಂದು ತಿಳಿಸಲಾಗಿದೆ.
ದಟ್ಟ ಮಂಜಿನಿಂದಾಗಿ ರಸ್ತೆ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಿಹಾರದಲ್ಲಿ ದಟ್ಟ ಮಂಜಿನ ವಾತಾವರಣ ಹಿನ್ನಲೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕ ಕ್ರಮವಾಗಿ ಶಾಲಾ ಮತ್ತು ಕಾಲೇಜಿಗೆ ಡಿ. 31ರವರೆಗೆ ರಜೆ ಘೋಷಣೆ ಮಾಡಲಾಗಿದೆ.
ಹವಾಮಾನ ವರದಿ ಅನುಸಾರ ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಉತ್ತರ ಭಾಗದಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ಇರಲಿದೆ. ಹರ್ಯಾಣ, ಚಂಡೀಗಡ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಈ ರೀತಿಯ ವಾತಾವರಣ ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದೆ. ಮುಂದಿನ 24 ಗಂಟೆಯಲ್ಲಿ ದೆಹಲಿಯಲ್ಲಿ ಚಳಿ ತಾಪಮಾನ ತೀವ್ರವಾಗಲಿದೆ. ಮುಂದಿನ ಮೂರು ದಿನದವರೆಗೆ ಚಳಿ ಹೆಚ್ಚಿರಲಿದೆ.
ಪಂಜಾಬ್‌ನ ಹಲವು ಭಾಗದಲ್ಲಿ ನಾಲ್ಕು ದಿನ ದಟ್ಟ ಮಂಜು ಕವಿಯಲಿದ್ದು, ಶೀತಗಾಳಿ ಅಧಿಕವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರ ಹೊರತಾಗಿ ಹಿಮಾಚಲ ಪ್ರದೇಶ, ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಒಡಿಶಾ ಮತ್ತು ತ್ರಿಪುರಾದಲ್ಲಿ ಜನರು ಶೀತಗಾಳಿಗೆ ತತ್ತರಿಸಲಿದ್ದಾರೆ.
ಮಂಜು ಕವಿದ ವಾತಾವರಣ ಹಿನ್ನಲೆ ಡಿ. 24, 23ರಂದು ದೆಹಲಿಯಲ್ಲಿ 14 ರೈಲುಗಳು ವಿಳಂಬ ಸಂಚಾರ ನಡೆಸಿದ್ದವು. ದಟ್ಟ ಮಂಜು ಹಿನ್ನೆಲೆ ಗೋಚರತೆ ಪ್ರಮಾಣ ಕುಗ್ಗಿದೆ.
ಇದನ್ನೂ ಓದಿ: ಕೊರೊನಾ ಬಗ್ಗೆ ಎಚ್ಚರ: ಕೊನೆಯ ಮನ್ ಕಿ ಬಾತ್ನಲ್ಲಿ ಜನರಿಗೆ ಪ್ರಧಾನಿ ಮೋದಿ ಕಿವಿಮಾತು