ಚಂಡೀಗಢ : ಬಸ್ಸಿ ಪಠಾಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರ ಸಹೋದರ ಮನೋಹರ್ ಸಿಂಗ್ ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
86 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್, ಶನಿವಾರ ಬಸ್ಸಿ ಪಠಾಣ (ಎಸ್‌ಸಿ) ಸ್ಥಾನದಿಂದ ಪಕ್ಷದ ಶಾಸಕ ಗುರುಪ್ರೀತ್ ಸಿಂಗ್ಗೆ ಟಿಕೆಟ್ ನೀಡಿದೆ.
ಗುರ್‌ಪ್ರೀತ್ ಸಿಂಗ್ ಜಿಪಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ನಿರ್ಧಾರವನ್ನು ಕ್ಷೇತ್ರದ ಜನತೆಗೆ ಮಾಡಿದ ಅನ್ಯಾಯ ಎಂದು ಕರೆದಿರುವ ಮನೋಹರ್ ಸಿಂಗ್, ಹಾಲಿ ಶಾಸಕರು ಅಸಮರ್ಥರು ಮತ್ತು ನಿಷ್ಪ್ರಯೋಜಕರು ಎಂದು ಆರೋಪಿಸಿದ್ದಾರೆ.
ಬಸ್ಸಿ ಪಠಾಣ ಪ್ರದೇಶದ ಹಲವಾರು ಮುಖಂಡರು ಸ್ವತಂತ್ರವಾಗಿ ಸ್ಪರ್ಧಿಸುವಂತೆ ನನ್ನನ್ನು ಕೇಳಿದ್ದಾರೆ. ಅವರು ಹೇಳಿದಂತೆ ನಾನು ಹೋಗುತ್ತೇನೆ. ಹಿಂದೆ ಸರಿಯುವ ಮಾತೇ ಇಲ್ಲ. ನಾನು ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಮನೋಹರ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಯುಪಿ ಅಖಾಡ : ಚುನಾವಣೆಗೆ 9 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಓವೈಸಿ
ಸಿಂಗ್ ಕಳೆದ ವರ್ಷ ಆಗಸ್ಟ್‌ನಲ್ಲಿ ಖರಾರ್ ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಲವಾರು ಮುಖಂಡರು ಒತ್ತರ ಹಾಕಿದ್ದರಿಂದ ಈ ನಿರ್ಧಾರ ಮಾಡಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ 'ಒಂದು ಕುಟುಂಬ-ಒಂದು ಟಿಕೆಟ್' ಸೂತ್ರದ ಮೇಲೆ ಪಕ್ಷವು ಜಲಂಧರ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಪುತ್ರ ವಿಕ್ರಮಜಿತ್ ಸಿಂಗ್ ಚೌಧರಿ ಅವರನ್ನು ಫಿಲ್ಲೌರ್ ಕ್ಷೇತ್ರದಿಂದ ಕಣಕ್ಕಿಳಿಸಿದೆ ಎಂದು ಚನ್ನಿ ಹೇಳಿದ್ದಾರೆ.
ಅದೇ ರೀತಿ ಫತೇಘರ್ ಸಾಹಿಬ್ ಸಂಸದ ಅಮರ್ ಸಿಂಗ್ ಅವರ ಪುತ್ರ ಕಮಿಲ್ ಅಮರ್ ಸಿಂಗ್ ಅವರಿಗೆ ರಾಯ್ಕೋಟ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.