ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಡಿಲಿಮಿಟೇಶನ್ ಆಯೋಗ ಇಂದು ತನ್ನ ಅಂತಿಮ ವರದಿ ಸಲ್ಲಿಸಿದೆ. ವರದಿ ಪ್ರಕಾರ, ವಿಧಾನಸಭೆ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ, 46 ರಿಂದ 47 ಕ್ಕೆ ಸೀಟುಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ ಹಾಗೆ ಜಮ್ಮುವಿನಲ್ಲಿ 37 ರ ಬದಲಿಗೆ 43 ಸ್ಥಾನಗಳನ್ನು ಹೆಚ್ಚಿಸಲು ಸೂಚಿಸಿದ್ದು, ಈಗ ಒಟ್ಟಾರೆ 90 ವಿಧಾನಸಭೆ ಸ್ಥಾನಗಳನ್ನು ಹೊಂದಿದಂತಾಗುತ್ತದೆ.
ನ್ಯಾಯಮೂರ್ತಿ (ನಿವೃತ್ತ) ರಂಜನಾ ದೇಸಾಯಿ ನೇತೃತ್ವದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಮೂರು ಸದಸ್ಯರ ಡಿಲಿಮಿಟೇಷನ್ ಆಯೋಗವು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಮರುಸಂಘಟಿಸುವ ಅಂತಿಮ ಆದೇಶಕ್ಕೆ ಇಂದು ಸಹಿ ಹಾಕಿದೆ. ಆದೇಶದ ನಕಲು ಪ್ರತಿ ಹಾಗೂ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ಅವುಗಳ ಗಾತ್ರದ ವಿವರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಬಳಿಕ ಗೆಜೆಟ್ ಅಧಿಸೂಚನೆ ಮೂಲಕ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 83 ರಿಂದ 90 ಕ್ಕೆ ಹೆಚ್ಚಿಸಲು ಆಯೋಗವು ಪ್ರಸ್ತಾಪಿಸಿದೆ. ಜೊತೆಗೆ, ಪಾಕಿಸ್ತಾನದ ಆಡಳಿತದ ಕಾಶ್ಮೀರದಲ್ಲಿ ಇನ್ನೂ 24 ಸೀಟುಗಳು ಖಾಲಿ ಇವೆ. ಮೊದಲ ಬಾರಿಗೆ ಪಟ್ಟಿ ಮಾಡಲಾದ ಬುಡಕಟ್ಟುಗಳಿಗೆ ಒಂಬತ್ತು ಸ್ಥಾನಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಮಿತಿಯು ಜಮ್ಮುವಿಗೆ ಆರು ಮತ್ತು ಕಾಶ್ಮೀರಕ್ಕೆ ಒಂದು ಹೆಚ್ಚುವರಿ ಸ್ಥಾನವನ್ನು ಪ್ರಸ್ತಾಪಿಸಿದೆ. ಇಲ್ಲಿಯವರೆಗೆ ಕಾಶ್ಮೀರ ವಿಭಾಗವು 46 ಸ್ಥಾನಗಳನ್ನು ಮತ್ತು ಜಮ್ಮು ವಿಭಾಗವು 37 ಸ್ಥಾನಗಳನ್ನು ಹೊಂದಿತ್ತು.
ಸಮಿತಿಯನ್ನು ಮಾರ್ಚ್ 2020 ರಲ್ಲಿ ರಚಿಸಲಾಗಿದ್ದು, ಕಳೆದ ವರ್ಷ ಈ ಸಮಿತಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಇದಾದ ನಂತರ ಫೆಬ್ರವರಿಯಲ್ಲಿ ಕೆಲಸವನ್ನು ಸಂಪೂರ್ಣಗೊಳಿಸಲು ಮತ್ತೆ ಎರಡು ತಿಂಗಳ ವಿಸ್ತರಣೆಯನ್ನು ನೀಡಲಾಗಿತ್ತು.
ಇದನ್ನೂ ಓದಿ: ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು!