ನವದೆಹಲಿ: ಹೆಚ್ಚುತ್ತಿರುವ ಕೋವಿಡ್-19 ಸೋಂಕಿತರಿಗೆ ಸೂಕ್ತ ಹಾಗೂ ಸಕಾಲಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಮಲೀಲಾ ಮೈದಾನದಲ್ಲಿ 500 ಹಾಸಿಗೆಗಳ ಕೋವಿಡ್ ಐಸಿಯು ಚಿಕಿತ್ಸಾ ಆಸ್ಪತ್ರೆಯನ್ನು ಆರಂಭಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಮೇ ತಿಂಗಳ ಅಂತ್ಯಕ್ಕೆ ಆಸ್ಪತ್ರೆ ನಿರ್ಮಾಣ ಪೂರ್ಣವಾಗಲಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದರು.
ದೆಹಲಿಯಲ್ಲಿರುವ ಪ್ರಮುಖ ಎರಡು ಸರ್ಕಾರಿ ಆಸ್ಪತ್ರೆಗಳಾದ ಗುರು ತೇಗ ಬಹಾದುರ್ ಆಸ್ಪತ್ರೆ ಹಾಗೂ ಎಲ್ಎನ್ಜೆಪಿ ಆಸ್ಪತ್ರೆಗಳಿಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಸಿಎಂ, "ಎಲ್ಎನ್ಜೆಪಿ ಆಸ್ಪತ್ರೆ ಎದುರಿನಲ್ಲಿಯೇ ರಾಮಲೀಲಾ ಮೈದಾನದಲ್ಲಿ ನಾವು 500 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲಿದ್ದೇವೆ. ಕೇವಲ ಕೋವಿಡ್ ರೋಗಿಗಳಿಗಾಗಿ ಮಾತ್ರ ಮೀಸಲಾಗಿರಲಿರುವ ಈ ಆಸ್ಪತ್ರೆ ಶೀಘ್ರ ಕಾರ್ಯಾರಂಭಿಸಲಿದೆ." ಎಂದರು.
ಕೋವಿಡ್ ರೋಗಿಗಳಿಗೆ ತಕ್ಷಣ ಚಿಕಿತ್ಸೆಗೆ ಅನುಕೂಲವಾಗುವಂತೆ ದೆಹಲಿ ಸರ್ಕಾರವು ಬುರಾರಿ ಮೈದಾನದಲ್ಲಿಯೂ 1000 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದೆ. ಈ ತಾತ್ಕಾಲಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆಯೂ ಇರಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.