ನವದೆಹಲಿ: ವಾಹನದ ಬಾನೆಟ್ ಮೇಲೆ ವ್ಯಕ್ತಿಗಳನ್ನು ಎಳೆದೊಯ್ಯುವ ಘಟನೆಗಳು ವರದಿಯಾಗುತ್ತಲೇ ಇವೆ. ಇದೀಗ ದೆಹಲಿಯ ಲಜಪತ್ ನಗರ ಪ್ರದೇಶದಲ್ಲಿ ಮಿನಿ ಬಸ್ಸೊಂದು ಡಿಕ್ಕಿ ಹೊಡೆದಿದ್ದಲ್ಲದೇ, ಅದರ ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಸ್ವಲ್ಪ ದೂರ ಎಳೆದೊಯ್ದ ಘಟನೆ ನಡೆದಿದೆ.
ಭಾನುವಾರ (ಡಿಸೆಂಬರ್ 17) ರಾತ್ರಿ ಈ ಆಘಾತಕಾರಿ ಘಟನೆ ನಡೆದಿದೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಒಂದು ವಿಡಿಯೋದಲ್ಲಿ ಚಲಿಸುತ್ತಿರುವ ಮಿನಿ ಬಸ್ನ ಬಾನೆಟ್ ಮೇಲೆ ವ್ಯಕ್ತಿ ನಿಂತುಕೊಂಡಿದ್ದು ಇದ್ದರೆ, ಇನ್ನೊಂದರಲ್ಲಿ ಆತ ಕೆಳಗಿಳಿಯುವುದನ್ನು ಕಾಣಬಹುದು.
ಪೊಲೀಸರಿಗೆ ದೂರು ನೀಡಿದ ಪ್ರತ್ಯಕ್ಷದರ್ಶಿ: ಭಾನುವಾರ ರಾತ್ರಿ 11:30ರ ಸುಮಾರಿಗೆ ದಿಲ್ಲಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಬಂದಿದೆ. ಡಿಎನ್‌ಡಿ ಫ್ಲೈಓವರ್‌ನಿಂದ ನೋಯ್ಡಾ ಕಡೆಗೆ ಹೋಗುತ್ತಿದ್ದ ಮಿನಿ ಬಸ್ಸೊಂದು ಬೈಕ್ ಚಾಲಕನಿಗೆ ಲಜಪತ್ ನಗರ ಪ್ರದೇಶದಲ್ಲಿ ಡಿಕ್ಕಿ ಹೊಡೆದಿದೆ. ಬಳಿಕ ನಿಲ್ಲಿಸದೇ ವಾಹನವನ್ನು ಹಾಗೆಯೇ ಓಡಿಸಿಕೊಂಡು ಹೋಗಿದ್ದಾನೆ. ಈ ವೇಳೆ, ಬೈಕ್ ಚಾಲಕ ಬಾನೆಟ್ ಮೇಲೆ ಜಿಗಿದಿದ್ದಾನೆ. ಇಷ್ಟಾದರೂ ನಿಲ್ಲಿಸದ ಮಿನಿ ಬಸ್ ಚಾಲಕ ಸ್ವಲ್ಪ ದೂರ ವ್ಯಕ್ತಿಯ ಸಮೇತ ಚಲಾಯಿಸಿಕೊಂಡು ಹೋಗಿದ್ದಾನೆ.
ಈ ಆಘಾತಕಾರಿ ದೃಶ್ಯವನ್ನು ಬೇರೊಂದು ವಾಹನದಲ್ಲಿದ್ದವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸ್ವಲ್ಪ ದೂರ ಸಾಗಿದ ಬಳಿಕ ಮಿನಿ ಬಸ್ಸನ್ನು ದಿಢೀರ್ ನಿಲ್ಲಿಸಿದ್ದಾನೆ. ಬಾನೆಟ್ ಮೇಲಿದ್ದ ವ್ಯಕ್ತಿ ಅಲ್ಲಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ, ಅಮಾನವೀಯವಾಗಿ ನಡೆದುಕೊಂಡ ಮಿನಿ ಬಸ್ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದೆ.
ಕೇಸ್ ನೀಡಲು ಸಂತ್ರಸ್ತ ನಿರಾಕರಣೆ: ಬಾನೆಟ್ ಮೇಲೆ ಎಳೆದೊಯ್ಯಲ್ಪಟ್ಟ ವ್ಯಕ್ತಿಯು ಉತ್ತರಪ್ರದೇಶದವರಾಗಿದ್ದು, ದೂರು ನೀಡಲು ನಿರಾಕರಿಸುತ್ತಿದ್ದಾರೆ. ಅವರು ದೆಹಲಿಗೆ ಬರಲು ಹಿಂಜರಿಯುತ್ತಿದ್ದಾರೆ. ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಅವರು ಯಾವುದೇ ಪ್ರಕರಣ ದಾಖಲಿಸಿಲ್ಲ. ಈ ಬಗ್ಗೆ ಮನವೊಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.
ಈ ಹಿಂದೆಯೂ ಗ್ರೇಟರ್ ನೋಯ್ಡಾದಲ್ಲಿ ಸಂಭವಿಸಿದ ವಿಲಕ್ಷಣ ಘಟನೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಇಂಥದ್ದೇ ಅಪಾಯಕ್ಕೆ ಸಿಲುಕಿದ್ದಳು. ಕೆಟ್ಟು ನಿಂತಿದ್ದ ಕಾರನ್ನು ಎಳೆಯಲು ಟ್ರಕ್ ಚಾಲಕನ ಬಳಿಕ ಸಹಾಯ ಕೋರಿದ್ದಳು. ಕಾರನ್ನು ಎಳೆಯುತ್ತಿದ್ದಾಗ ವಿದ್ಯಾರ್ಥಿನಿ ಟ್ರಕ್ನ ಚಕ್ರಕ್ಕೆ ಸಿಲುಕಿದ್ದಳು. ಗಂಭೀರ ಗಾಯಗೊಂಡ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಳು.
ಇದನ್ನೂ ಓದಿ: ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ: 9 ಕಾರುಗಳ ಜಖಂ