ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮೈ ಕೊರೆಯುವ ಚಳಿಯಿಂದ ಜನರು ತತ್ತರಿಸಿದ್ದಾರೆ. ತೀವ್ರ ಚಳಿಯಿಂದ ರಕ್ಷಣೆ ಪಡೆಯುವ ಸಲುವಾಗಿ ರಸ್ತೆಗಳ ಬದಿಯಲ್ಲಿ ಜನರು ಬೆಂಕಿ ಹಾಕಿ, ಮೈ ಕಾಯಿಸಿಕೊಳ್ಳುವ ಮೂಲಕ ಚಳಿಯಿಂದ ರಕ್ಷಣೆ ಪಡೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಈ ಕುರಿತು ಮಾತನಾಡಿರುವ ದೆಹಲಿ ನಿವಾಸಿಗಳು. ನಗರದಲ್ಲಿ ಭಾರೀ ಚಳಿ ಇದ್ದು, ಬೆಂಕಿ ಕಾಯಿಸಿಕೊಳ್ಳದೇ ಇದರಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಕೆಲಸಕ್ಕೆಂದು ಬೆಳಗ್ಗೆ 5ಗಂಟೆಗೆ ಮನೆ ಬಿಟ್ಟಿರುವೆ. ಈ ಚಳಿಯಿಂದ ರಕ್ಷಣೆ ಪಡೆಯಲು ಇರುವ ಮಾರ್ಗ ಎಂದರೆ ಅದು ಬೆಂಕಿ ಕಾಯಿಸಿಕೊಳ್ಳುವುದೇ ಆಗಿದೆ ಎಂದು ನಿವಾಸಿಯೊಬ್ಬರು ಚಳಿಯಿಂದಾದ ತೊಂದರೆ ಬಗ್ಗೆ ವಿವರಿಸಿದ್ದಾರೆ.
ಮತ್ತೊಂದು ಕಡೆ ದೆಹಲಿಯಲ್ಲಿ ವಾಯುಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗುತ್ತಿದೆ. ಎಕ್ಯೂಐ ಮಟ್ಟ 301 ತಲುಪಿದ್ದು, ಗಾಳಿ ಮಟ್ಟ ತೀರ ಕೆಟ್ಟದಾಗಿದೆ. ಜನರು ಉಸಿರಾಟದ ತೊಂದರೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ಅನುಸಾರ, ಜನವರಿ 2023 ರಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಇರಲಿದೆ. ಮಧ್ಯ ಭಾರತದ ಅನೇಕ ಭಾಗಗಳಲ್ಲಿ ಮತ್ತು ಪೂರ್ವ ಮತ್ತು ವಾಯುವ್ಯ ಭಾರತದಲ್ಲಿ ಹವಾಮಾನ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ.
ಪಶ್ಚಿಮ ಬಂಗಾಳದಲ್ಲೂ ತೀವ್ರ ಶೀತಗಾಳಿ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕೂಡ ಶೀತಗಾಳಿ ಮುಂದುವರೆದಿದೆ. ದಟ್ಟವಾದ ಮಂಜು ಕವಿದ ವಾತಾವರಣ ಇದ್ದು, ಜನ ಭಾರಿ ಚಳಿಗೆ ತತ್ತರಿಸಿ ಹೋಗಿದ್ದಾರೆ. ವಾಯುವ್ಯ ಭಾರತದಲ್ಲಿ ಮುಂದಿನ ಐದು ದಿನಗಳ ಕಾಲ ದಟ್ಟ ಮಂಜು ಕವಿದ ವಾತಾವರಣ ಮತ್ತು ಶೀತಗಾಳಿ ಮುಂದುವರೆಯಲಿದೆ ಎಂದು ಐಎಂಡಿ ತಿಳಿಸಿದೆ.
ಉತ್ತರಖಂಡ್, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವೆಡೆ ರಾತ್ರಿ ಮತ್ತ ಬೆಳಗ್ಗಿನ ಹೊತ್ತು ದಟ್ಟ ಮಂಜು ಕವಿದ ವಾತಾವಾರಣ ಇನ್ನು ಐದು ದಿನಗಳ ಕಾಲ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.
ಪಂಜಾಬ್ನಲ್ಲಿ ಶಾಲೆಗಳಿಗೆ ರಜೆ ಘೋಷಣೆ: ಮುಂದಿನ ದಿನಗಳಲ್ಲಿ ಚಳಿ ತನ್ನ ಆರ್ಭಟ ತೋರಲಿದ್ದು, ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರವು ಎಲ್ಲ ಖಾಸಗಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಚಳಿಗಾಲದ ರಜೆ ಘೋಷಿಸಿದೆ. ಜನವರಿ 8 ರವರೆಗೆ ರಜೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಬೈನ್ಸ್ ಅವರು ಟ್ವೀಟ್ ಮೂಲಕ ಶಾಲೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಇದರೊಂದಿಗೆ ಅಂಗನವಾಡಿ ಕೇಂದ್ರಗಳಿಗೆ ಜನವರಿ 8ರವರೆಗೆ ರಜೆ ಘೋಷಿಸಲಾಗಿದ್ದು, ಚಂಡೀಗಢ ಹವಾಮಾನ ಇಲಾಖೆ ಪ್ರಕಾರ ಚಂಡೀಗಢದಲ್ಲಿ ಕನಿಷ್ಠ ತಾಪಮಾನ 6.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ 5.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ.
ಇದನ್ನೂ ಓದಿ: ಗುರುವಾಯೂರು ದೇವಾಲಯಕ್ಕೆ ಮುಸ್ಲಿಂ ಯುವತಿಯಿಂದ ಶ್ರೀಕೃಷ್ಣನ 101 ಕಲಾಕೃತಿ ಉಡುಗೊರೆ