ಹೈದರಾಬಾದ್ : ಸೈಬರ್ ಕ್ರೈಮ್ ನಿಗ್ರಹಿಸುವ ಪ್ರಯತ್ನವಾಗಿ ದೆಹಲಿ ಪೊಲೀಸರು ಟ್ರೂ ಕಾಲರ್‌ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ್ದಾರೆ. ಮೊಬೈಲ್ ಕರೆ ಮಾಡುವ ಸಮಯದಲ್ಲಿ ಕರೆ ಮಾಡುವವರ ಮತ್ತು ಕರೆ ಸ್ವೀಕರಿಸುವವರ ಸಂಖ್ಯೆಯನ್ನು ಪರಸ್ಪರ ತೋರಿಸುವ ಆ್ಯಪ್ ಟ್ರೂಕಾಲರ್ ಆಗಿದೆ. ಟ್ರೂಕಾಲರ್ ಬಳಕೆದಾರರಿಗೆ ಸೈಬರ್ ವಂಚನೆಗಳು ಮತ್ತು ಇತರರ ಹೆಸರಿನಲ್ಲಿ ಕರೆ ಮಾಡಿ ವಂಚಿಸುವ ಯತ್ನಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಇತರ ಬಳಕೆದಾರರ ಸಲಹೆಗಳನ್ನು ಆಧರಿಸಿ ಟ್ರೂಕಾಲರ್ ನಿರ್ದಿಷ್ಟ ಸಂಖ್ಯೆಗಳ ಮೇಲೆ ಬ್ಯಾಡ್ಜ್ ಅನ್ನು ತೋರಿಸುತ್ತದೆ.
ಒಪ್ಪಂದದ ಭಾಗವಾಗಿ ಕಿರುಕುಳ, ಹಗರಣ ಮತ್ತು ಇತರ ನೋಂದಾಯಿತ ಸಮಸ್ಯೆಗಳಿಗೆ ಸಂಬಂಧಿಸಿದ ಫೋನ್ ನಂಬರ್ಗಳನ್ನು ದೆಹಲಿ ಪೊಲೀಸರು ಟ್ರೂಕಾಲರ್ಗೆ ನೀಡಲಿದ್ದಾರೆ. ಟ್ರೂಕಾಲರ್ ಇಂಥ ನಂಬರ್ಗಳನ್ನು ವಿಶೇಷವಾಗಿ ಮಾರ್ಕ್ ಮಾಡಲಿದೆ. ಈ ಒಪ್ಪಂದದ ಕಾರಣದಿಂದ ದೆಹಲಿ ನಾಗರಿಕರು ಈ ನಂಬರ್ಗಳಿಂದ ತಮಗೆ ಕರೆ ಬಂದಾಗ ಜಾಗೃತಿ ವಹಿಸಬಹುದು ಹಾಗೂ ಈ ನಂಬರ್ಗಳು ಇನ್ನೂ ಸಕ್ರಿಯವಾಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಬಹುದು.
ಈ ಹಿಂದೆಯೂ ಸಹ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಟ್ರೂಕಾಲರ್ ಪೊಲೀಸ್ ಇಲಾಖೆಗೆ ಸಾಕಷ್ಟು ಸಹಾಯ ಮಾಡಿತ್ತು. ಆಮ್ಲಜನಕದ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ಔಷಧಗಳು ಮತ್ತು ವೈರಸ್ ಚಿಕಿತ್ಸೆಗೆ ಸಂಬಂಧಿಸಿದ ಇತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ಸಾಕಷ್ಟು ವಂಚನೆಗಳು ನಡೆದಿದ್ದವು. ಇವನ್ನು ತಡೆಯಲು ಟ್ರೂಕಾಲರ್ ತುಂಬಾ ಸಹಕಾರಿಯಾಗಿತ್ತು.
ಈಗ, ಟ್ರೂಕಾಲರ್‌ನೊಂದಿಗೆ ಸಹಿ ಮಾಡಲಾದ ಒಪ್ಪಂದವು ಸೈಬರ್ ಕ್ರೈಮ್ ವಂಚನೆಗಳಿಗೆ ಸಂಬಂಧಿಸಿದ ನಮ್ಮ ಅಧಿಕಾರಿಗಳಿಗೆ ಮಾಹಿತಿ ನೀಡುತ್ತದೆ. ಟ್ರೂಕಾಲರ್ನಲ್ಲಿ ಹಸಿರು ಬ್ಯಾಡ್ಜ್ ಮತ್ತು ನೀಲಿ ಟಿಕ್ ಕಾಣಲಿವೆ. ಸರ್ಕಾರಿ ಸೇವೆಗಳ ಬ್ಯಾಡ್ಜ್ ಅನ್ನು ಸಹ ಪ್ರತ್ಯೇಕವಾಗಿ ನೀಡಲಾಗುತ್ತದೆ ಎಂದು ವಿಶೇಷ ಆಯುಕ್ತ ಸಂಜಯ್ ಸಿಂಗ್ ತಿಳಿಸಿದ್ದಾರೆ. ವಂಚಕರು ಅನೇಕ ಬಾರಿ ಪೊಲೀಸ್ ಅಧಿಕಾರಿಗಳಂತೆ ಪೋಸ್ ನೀಡಿ, ವಾಟ್ಸ್ಆ್ಯಪ್ ಪ್ರೊಫೈಲ್‌ನಲ್ಲಿ ಹಿರಿಯ ಅಧಿಕಾರಿಗಳ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಂದ ಹಣವನ್ನು ಸುಲಿಗೆ ಮಾಡಿದ್ದಾರೆ. ಇದು ಬಳಕೆದಾರರಿಗೆ ಸರ್ಕಾರಿ ಅಧಿಕಾರಿಗಳ ವೆರಿಫೈಡ್ ಸಂಖ್ಯೆಗಳನ್ನು ಗುರುತಿಸಲು ಮತ್ತು ವಂಚನೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ದೆಹಲಿ ಪೊಲೀಸರ ಎಲ್ಲ ವೆರಿಫೈಡ್ ಸಂಖ್ಯೆಗಳು ಹಸಿರು ಬ್ಯಾಡ್ಜ್ ಮತ್ತು ನೀಲಿ ಟಿಕ್ ಮಾರ್ಕ್ ಅನ್ನು ಹೊಂದಿರುತ್ತವೆ. ಇದು ಬಳಕೆದಾರರ ಸಲುವಾಗಿ ವೆರಿಫೈ ಮಾಡಲಾದ ನಂಬರ್ ಆಗಿದೆ ಎಂಬ ಟ್ಯಾಗ್ ಈ ನಂಬರ್ ಮೇಲೆ ಕಾಣಿಸುತ್ತದೆ. ದೆಹಲಿ ಪೊಲೀಸರೊಂದಿಗೆ ನಮ್ಮ ಸಹಯೋಗದ ಮೂಲಕ, ನಾವು ವಂಚನೆಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ದೆಹಲಿ ಪೊಲೀಸ್ ಅಧಿಕಾರಿಯು ನಿಮಗೆ ಕರೆ ಮಾಡಿದರೆ ನಿಮಗೆ ಹಸಿರು ಬ್ಯಾಡ್ಜ್ ಅಥವಾ ನೀಲಿ ಟಿಕ್ ಕಾಣಿಸುತ್ತದೆ ಎಂದು ಟ್ರೂಕಾಲರ್ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕಿ ಪ್ರಜ್ಞಾ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ : ಜಾರ್ಖಂಡ್: ಸೈಬರ್ ಕ್ರೈಂ ಆರೋಪಿ ಮೊಬೈಲ್ನಲ್ಲಿ 6 ಲಕ್ಷ ಜನರ ಡೇಟಾ ಪತ್ತೆ