ನವದೆಹಲಿ: ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ್ದಾರೆ. ಆ.22 ರಂದು(ನಾಳೆ) ಪ್ರತಿಭಟನೆ ನಡೆಸಲು ಟಿಕಾಯತ್ ಮತ್ತು ಅವರ ಬೆಂಬಲಿಗರು ನವದೆಹಲಿಗೆ ಬರುತ್ತಿದ್ದರು. ಇದಕ್ಕೂ ಮುನ್ನವೇ ಉತ್ತರ ಪ್ರದೇಶದ ಫಾಜಿಪುರದ ಬಳಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಭದ್ರತಾ ಕಾರಣದಿಂದ ಪೊಲೀಸರು ಟಿಕಾಯತ್ ಅವರನ್ನು ದೆಹಲಿ ಪ್ರವೇಶಿಸಲು ಅವಕಾಶ ನೀಡಿಲ್ಲ. ಅಲ್ಲದೇ ಟಿಕಾಯತ್ ಮತ್ತು ಅವರ ಬೆಂಬಲಿಗರನ್ನು ಮಧು ವಿಹಾರ್ ಪೊಲೀಸ್ ಠಾಣೆಗೆ ಕರೆದೊಯ್ದ, ಅವರಿಗೆ ಅಲ್ಲಿಂದ ಹಿಂದಿರುಗುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅವರನ್ನು ವಶಕ್ಕೆ ಪಡೆದ ಎರಡು ಗಂಟೆಗಳ ನಂತರ, ಟಿಕಾಯತ್ ದೆಹಲಿ ಪ್ರವೇಶಿಸುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ರೈತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಬಂಧನವು ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಲಿದೆ. ಕೊನೆಯ ಉಸಿರಿನವರೆಗೂ ಹೋರಾಡಲಿದ್ದೇನೆ. ನಾವು ಜಂತರ್ ಮಂತರ್‌ನಲ್ಲಿ ನಿರುದ್ಯೋಗ ಸಮಸ್ಯೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುತ್ತಿದ್ದೆವು. ಆದರೆ ನಮ್ಮನ್ನು ಅಲ್ಲಿಗೆ ಹೋಗಲು ಬಿಡದೇ, ಪೊಲೀಸರು ಬಂಧಿಸಿದ್ದಾರೆ ಎಂದರು.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಜೂನಿಯರ್ ಎನ್‌ಟಿಆರ್ ಭೇಟಿಯಾಗಲಿರುವ ಅಮಿತ್ ಶಾ
ರಾಕೇಶ್ ಟಿಕಾಯತ್ ಮತ್ತು ಹಲವು ರೈತ ಸಂಘಟನೆಗಳು ಆಗಸ್ಟ್ 22 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ. ರಾಕೇಶ್ ಟಿಕಾಯತ್ ಅವರನ್ನು ಬಂಧಿಸಿದ ಕೂಡಲೇ ರೈತರು ಗಾಜಿಯಾಬಾದ್ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.