ನವದೆಹಲಿ: ದೇಶದಾದ್ಯಂತ ಸಾಕಷ್ಟು ಸದ್ದು ಮಾಡಿರುವ ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೈಆರ್ಎಸ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಪುತ್ರ ರಾಘವ ರೆಡ್ಡಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಬಂಧಿಸಿದೆ. ಇದರ ನಂತರ ಇಡಿ ಅಧಿಕಾರಿಗಳು ದೆಹಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯಕ್ಕೆ ರಾಘವ ರೆಡ್ಡಿ ಅವರನ್ನು ಹಾಜರುಪಡಿಸಿದ್ದಾರೆ. ಈ ವೇಳೆ 10 ದಿನಗಳ ಇಡಿ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿ ಆದೇಶಿಸಿದೆ.
ದೆಹಲಿ ಮದ್ಯ ನೀತಿಯಲ್ಲಿ ಸೌತ್ ಗ್ರೂಪ್ ಪರವಾಗಿ 100 ಕೋಟಿ ರೂಪಾಯಿ ದೇಣಿಗೆ ನೀಡಿದ ಪ್ರಕರಣದಲ್ಲಿ ಮಾಗುಂಟ ರಾಘವ ರಡ್ಡಿ ಪಾತ್ರವಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳೊಂದಿಗೂ ನಿಕಟ ಸಂಬಂಧ ಹೊಂದಿದ್ದರು. ಆದ್ದರಿಂದ ಈ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ತನಿಖೆಗಾಗಿ ರಾಘವ ರೆಡ್ಡಿಯನ್ನು ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಇಡಿ ವಾದವನ್ನು ಪರಿಗಣಿಸಿದ ಕೋರ್ಟ್ 10 ದಿನಗಳ ಕಸ್ಟಡಿಗೆ ಅನುಮತಿ ನೀಡಿತು.
ಅಲ್ಲದೇ, ಸಂಸದರ ಪುತ್ರರಾಗಿರುವ ಆರೋಪಿ ಮದ್ಯ ತಯಾರಿಕೆ ಮತ್ತು ಸಗಟು ವ್ಯಾಪಾರ ಹೊಂದಿದ್ದಾರೆ. ಸೌತ್ ಗ್ರೂಪ್ ಹೆಸರಿನಲ್ಲಿ 100 ಕೋಟಿ ಸಂಗ್ರಹಿಸಿ ರಾಘವ ರೆಡ್ಡಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿಂದ ದೇಣಿಗೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ, ಬಂಧಿತ ಸಮೀರ್ ಮಹೇಂದ್ರುಗೆ ಸೇರಿದ ಇಂಡೋ ಸ್ಪಿರಿಟ್ ಕಂಪನಿಯಲ್ಲಿ ರಾಘವ ರೆಡ್ಡಿ ಪಾಲು ಕೂಡ ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ಇಡಿ ತಿಳಿಸಿದೆ.
ಹವಾಲಾ ಮೂಲಕ ರಿಯಾಯಿತಿ: ಇಷ್ಟೇ ಅಲ್ಲ, ಈಗಾಗಲೇ ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಶರತ್ ಚಂದ್ರರೆಡ್ಡಿ ಜೊತೆ ರಾಘವ ಉತ್ತಮ ಸಂಬಂಧ ಹೊಂದಿದ್ದಾರೆ. ದೆಹಲಿ ಮದ್ಯ ನೀತಿಯಿಂದ ಲಾಭ ಪಡೆಯಲು ಹವಾಲಾ ಮಾರ್ಗದ ಮೂಲಕ ರಿಯಾಯಿತಿಗಳನ್ನು ಕೊಡಲಾಗಿದೆ. ಪಿಎಂಎಲ್‌ಎ ಕಾಯ್ದೆಯಡಿ ಇದುವರೆಗೆ 30 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆ ಎಲ್ಲ ವಿವರಗಳನ್ನು ಈಗಾಗಲೇ ಸಲ್ಲಿಸಿರುವ ಆರೋಪಪಟ್ಟಿಗಳಲ್ಲಿ ಉಲ್ಲೇಖಿಸಲಾಗಿದೆ ಎಂದೂ ಎಂದು ಇಡಿ ಅಧಿಕಾರಿಗಳು ಕೋರ್ಟ್ ಗಮನಕ್ಕೆ ತಂದರು.
ಜೊತೆಗೆ ಈವರೆಗಿನ ಸಣ್ಣ ತನಿಖೆಯಲ್ಲಿ ಹಲವು ವಿಷಯಗಳು ಬಯಲಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೊಂದಿಗೆ ನಿಕಟ ಸಂಪರ್ಕದಲ್ಲಿರುವ ರಾಘವ ರೆಡ್ಡಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಬೇಕಿದೆ. ಆದ್ದರಿಂದ ಆರೋಪಿಯನ್ನು ಹತ್ತು ದಿನಗಳ ಕಾಲ ವಶಕ್ಕೆ ನೀಡುವಂತೆ ಅಧಿಕಾರಿಗಳು ವಾದ ಮಾಡಿದರು. ಮತ್ತೊಂದೆಡೆ, ಈ ವಾದವನ್ನು ಒಪ್ಪದ ರಾಘವರೆಡ್ಡಿ ಪರ ವಕೀಲರು, ಬಂಧನಕ್ಕೂ ಮುನ್ನ ಇಡಿ ರಚನೆ ಮಾಡಿರುವ ವಿಶೇಷ ಕಾನೂನಿನ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೇ, ರಿಮಾಂಡ್ ಅರ್ಜಿಯನ್ನೂ ನೀಡಿಲ್ಲ. ಆರೋಪಿಯನ್ನು ಬಂಧಿಸುವುದಾಗಿ ಮೊದಲೇ ತಿಳಿಸಲಾಗಿತ್ತು ಎಂದು ಪ್ರತಿವಾದ ಮಾಡಿದರು.
ಅಷ್ಟೇ ಅಲ್ಲ, ಬಂಧನ ಮಾಡುವ ಅಧಿಕಾರ ಇಲ್ಲದ ಇಡಿ ಹೇಗೆ ಬಂಧಿಸುತ್ತದೆ ಎಂದೂ ರಾಘವ ರೆಡ್ಡಿ ಪರ ವಕೀಲರು ಪ್ರಶ್ನಿಸಿದರು. ಈ ವೇಳೆ ರಿಮಾಂಡ್ ಅರ್ಜಿಗೆ ಆರೋಪಿ ಸಹಿಯನ್ನೂ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಪ್ರಶ್ನಿಸುವ ಅಧಿಕಾರ ನಮಗಿದೆ ಎಂದು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು. ವಾದ ಪ್ರತಿವಾದ ನಂತರ ನ್ಯಾಯಾಲಯವು ಇಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿತ್ತು. ಇದೇ ವೇಳೆ ಪ್ರತಿದಿನ ಒಂದು ಗಂಟೆ ಕಾಲ ಬಂಧಿತ ರಾಘವ ರೆಡ್ಡಿಯನ್ನು ಕುಟುಂಬ ಸದಸ್ಯರು ಭೇಟಿಯಾಗಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ತೆಲಂಗಾಣ ಸಿಎಂ ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧಿಸಿದ ಸಿಬಿಐ