ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಆದಷ್ಟು ಬೇಗ ಅಂಗೀಕರಿಸುವಂತೆ ಕೋರಿ ಬಿಆರ್ಎಸ್ ನಾಯಕಿ ಕೆ ಕವಿತಾ ಇಲ್ಲಿಯ ಜಂತರ್ ಮಂತರ್ನಲ್ಲಿ ಉಪವಾಸ ನಡೆಸಿದ ಮರುದಿನವೇ ಅಂದರೆ ಇಂದು ಅವರು ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ದೆಹಲಿ ಮಾಜಿ ಡಿಸಿಎಂ ಮನಿಶ್ ಸಿಸೋಡಿಯಾ ಬಂಧನದ ಬಳಿಕ ದೆಹಲಿ ಅಬಕಾರಿ ನೀತಿಯ ಅಕ್ರಮ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕವಿತಾ ಅವರಿಗೆ ಬುಧವಾರವೇ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿತ್ತು.
ಕಿಕ್ ಬ್ಯಾಕ್ ಪಡೆದ ಆರೋಪ: ಸಮನ್ಸ್ ಜಾರಿಯಾಗಿರುವ ಹಿನ್ನೆಲೆ ಇಂದು ಅವರು ಇಡಿ ಮುಂದೆ ಹಾಜರಾಗಲಿದ್ದು, ವಿಚಾರಣೆಗೆ ಒಳಪಡಲಿದ್ದಾರೆ. ಈ ವೇಳೆ ಇಡಿ ಅಧಿಖಾರಿಗಳು ಬಿಆರ್ಎಸ್ ನಾಯಕಿ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಇಡಿ ಬಂಧಿಸಿದೆ. ದೆಹಲಿ ಮದ್ಯ ಹಗರಣದಲ್ಲಿ ಕವಿತಾ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಇಡಿ ಗಂಭೀರ ಆರೋಪ ಮಾಡಿದೆ.
ಇಂದು ವಿಚಾರಣೆ ವೇಳೆ ಇಡಿ ಕವಿತಾ, ಅರುಣ್ ಪಿಳ್ಳೈ ಜೊತೆಗೆ ಪ್ರಶ್ನೆಗಳನ್ನು ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸೌತ್ ಗ್ರೂಪ್ ನೊಂದಿಗೆ ಉದ್ಯಮಿ ಅರುಣ್ ಪಿಳ್ಳೈ ಸಂಬಂಧ ಹೊಂದಿದ್ದು, ಇದರ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಿಗೆ ನೂರಾರು ಕೋಟಿಯನ್ನು ನೀಡಿರುವ ಆರೋಪ ಕೇಳಿ ಬಂದಿದೆ. ಅರುಣ್ ಪಿಳ್ಳೈ ಬಂಧನದ ಬೆನ್ನಲ್ಲೇ ಕವಿತಾ ಅವರಿಗೂ ಕೂಡ ಇಡಿ ಸಮನ್ಸ್ ಜಾರಿ ಮಾಡಿದೆ.
ಅಬಕಾರಿ ಅಕ್ರಮ ಪ್ರಕರಣದಲ್ಲಿ ಕವಿತಾ ಪ್ರಮುಖ ಪಾತ್ರವನ್ನು ಹೊಂದಿರುವುದು ಕಂಡು ಬಂದಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಈ ಸಂಬಂಧ ಮಾತನಾಡಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್, ಎಎಪಿ ಮನೀಶ್ ಸಿಸೋಡಿಯಾ ಬಂಧನಕ್ಕೆ ಬಿಆರ್ಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ಚೆನ್ನಾಗಿ ಬಲ್ಲ ಕವಿತಾ ಕೂಡ ಬಂಧನಕ್ಕೆ ಒಳಗಾಗುತ್ತಾರೆ ಎಂದಿದ್ದರು.
ಮೋದಿ ಸಮನ್ಸ್ ಎಂದ ಎಂಎಲ್ಸಿ: ಇಡಿ ಸಮನ್ಸ್ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕವಿತಾ ಮತ್ತು ಬಿಆರ್ಎಸ್ ಪಕ್ಷದ ನಾಯಕರು, ಇದು ಇಡಿ ಸಮನ್ಸ್ ಅಲ್ಲ, ಮೋದಿ ಸಮನ್ಸ್. ಇದು ನಮ್ಮನ್ನು ಬೆದರಿಸುವ ತಂತ್ರ. ಕೇಂದ್ರದ ವೈಫಲ್ಯಗಳನ್ನು ಬಹಿರಂಗಪಡಿಸಲು ನಮ್ಮ ಪಕ್ಷ ಹೋರಾಟ ಮುಂದಿವರೆಸುತ್ತೇನೆ ಎಂದಿದ್ದರು. ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿಯಾಗಿತ್ತು.
ಈ ಮಧ್ಯೆ ಸಮನ್ಸ್ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದ ಅವರು, ವಿಚಾರಣೆಗೆ ಹಾಜರಾಗುವ ಕುರಿತು ಕಾನೂನು ಸಲಹೆಯನ್ನು ಕೂಡ ಪಡೆದಿದ್ದರು. ಈ ವೇಳೆ ಮಾರ್ಚ್ 20ರಂದು ಜಂತರ್ ಮಂತರ್ನಲ್ಲಿ ಈಗಾಗಲೇ ಪ್ರತಿಭಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿಚಾರಣೆಗೆ ಹಾಜರಾಗುವುದು ಕಷ್ಟವಾಗಲಿದೆ. ಈ ಹಿನ್ನೆಲೆ ಸಮನ್ಸ್ ಮುಂದೂಡುವಂತೆ ಮನವಿಯನ್ನು ಕೂಡ ಮಾಡಿದ್ದರು.
ಇದನ್ನೂ ಓದಿ: ಕವಿತಾಗೆ ಕಳುಹಿಸಿದ್ದು ಇಡಿ ಸಮನ್ಸ್ ಅಲ್ಲ.. ಮೋದಿ ಸಮನ್ಸ್ : ಕೆಟಿಆರ್