ನವದೆಹಲಿ: ಮದುವೆಯಾದ ಒಂದು ತಿಂಗಳ ನಂತರ ಜನಿಸಿದ ಮಗುವಿಗೆ ಜೀವನಾಂಶ ನೀಡಲು ನಿರಾಕರಿಸಿದ ಕೆಳ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಅರ್ಜಿದಾರರ ಪತಿ ತನ್ನ ಮಗುವಿನ ಜೈವಿಕ ತಂದೆಯಲ್ಲ ಎಂದು ಹೇಳಿದ ಡಿಎನ್‌ಎ ವರದಿಯನ್ನು ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡು ಈ ತೀರ್ಪು ನೀಡಿದೆ.
ದಾಖಲೆಯಲ್ಲಿ ಲಭ್ಯವಿರುವ ಡಿಎನ್‌ಎ ವರದಿಯ ಪ್ರಕಾರ, ಮಗುವಿನ ಪೋಷಣೆ ಮಾಡುವುದಕ್ಕಾಗಿ ಹಣಕಾಸು ನೆರವು ನೀಡಲು ಪ್ರತಿವಾದಿಯನ್ನು (ಗಂಡ) ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ಅರ್ಜಿದಾರರು ಮತ್ತು ಪ್ರತಿವಾದಿಯ ನಡುವಿನ ವಿವಾಹದ ಸಮಯದಲ್ಲಿ ಮಗು ಜನಿಸಿದರೂ, ಮಗುವಿನ ಜೀವನಾಂಶವನ್ನು ಪಾವತಿಸಲು ಪತಿಯನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಮಗುವಿನ ಪೋಷಣೆಯ ಜವಾಬ್ದಾರಿಯನ್ನು ಜೈವಿಕ ತಂದೆಯೇ ಹೊಂದಿರುತ್ತಾನೆ ಎಂದು ಕಾನೂನಿನಲ್ಲಿ ತಿಳಿಸಲಾಗಿದೆ ಎಂದು ಪೀಠ ಇದೇ ವೇಳೆ ಹೇಳಿದೆ. ವಿವಾಹದ ಸಮಯದಲ್ಲಿ ಅವರು ಅಪ್ರಾಪ್ತ ವಯಸ್ಕರಾಗಿದ್ದರು ಎಂಬ ಪ್ರತಿವಾದಿಯ ವಕೀಲರ ವಾದವನ್ನೂ ಪೀಠವು ಇದೇ ವೇಳೆ ಗಮನಿಸಿದೆ. ಪತಿ ಅಪ್ರಾಪ್ತ ವಯಸ್ಕನಾಗಿದ್ದರೆ ಮದುವೆಯೇ ಅನೂರ್ಜಿತವಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಅರ್ಜಿದಾರ ಪತ್ನಿ ತಮ್ಮ ಗಳಿಕೆಯನ್ನ ಕೋರ್ಟ್ ಗಮನದಿಂದ ಮರೆ ಮಾಚಿದ್ದಾರೆ ಎಂಬ ಅಂಶವನ್ನ ಪ್ರತಿವಾದಿ ವಕೀಲರು ಕೋರ್ಟ್ ಗಮನಕ್ಕೆ ತಂದರು. ಇದರ ಸತ್ಯಾಸತ್ಯತೆ ತಿಳಿಯಲು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಅರ್ಜಿದಾರರ ಆದಾಯ ಸೇರಿದಂತೆ ಚಟುವಟಿಕೆಗಳ ಮಾಹಿತಿ ಪಡೆಯಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಅಡುಗೆ ಅಥವಾ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರೂ ಸಹ ಅವರು ಪ್ರಸ್ತುತ ಎಷ್ಟು ಗಳಿಸುತ್ತಿದ್ದಾರೆ ಎಂಬುದನ್ನ ಸೂಚಿಸಲು ದಾಖಲೆಗಳಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಇಬ್ಬರು ವ್ಯಕ್ತಿಗಳ ನಡುವಿನ ವಿವಾಹದ ಸಂಗತಿಯು ವಿವಾದಾಸ್ಪದವಾಗಿಲ್ಲ, ಆದರೆ, ಈ ವಿವಾಹದ ಕಾನೂನುಬದ್ಧತೆ ವಿವಾದಾಸ್ಪದವಾಗಿದೆ, ಇದು ಸಂಬಂಧಪಟ್ಟ ನ್ಯಾಯಾಲಯದ ಮುಂದಿರುವ ಹಾಗೂ ಅವರ ನಿರ್ಧಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಈ ವಿಚಾರವಾಗಿ ವಿಚಾರಣಾ ನ್ಯಾಯಾಲಯ ಜೀವನಾಂಶ ನಿರಾಕರಿಸುವ ಮೂಲಕ ಖಂಡಿತ ತಪ್ಪು ಮಾಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಶೇಷವಾಗಿ ಅರ್ಜಿದಾರರ ದಾಖಲೆಗಳಿಂದ ಅವರು ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನಕ್ಕೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ಕಾರ್ಮಿಕ ನ್ಯಾಯಾಲಯದ ಪೀಠಾಧಿಕಾರಿ ನೇಮಕ ವಿಳಂಬವಾದರೆ 10 ಲಕ್ಷ ರೂ ದಂಡ: ಕೆಂದ್ರ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ