ನವದೆಹಲಿ: ಭಾರತದ ಸ್ವಾತಂತ್ರ್ಯಕ್ಕಾಗಿ ಚಳವಳಿಗಳಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರನಿಗೆ 'ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ' ಪಾವತಿಸಲು ವಿಳಂಬ ಮಾಡಿದ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ.
96 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಉತ್ತಮ್ ಲಾಲ್ ಸಿಂಗ್ ಪಿಂಚಣಿ ಪ್ರಕರಣವನ್ನು ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ವಯೋವೃದ್ಧ ಸ್ವಾತಂತ್ರ್ಯ ಹೋರಾಟಗಾರನಿಗೆ ಪಿಂಚಣಿ ನೀಡಲು 40 ವರ್ಷಗಳ ಕಾಲ ಕಾಯುವಂತೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಕೇಂದ್ರ ಸರ್ಕಾರಕ್ಕೆ 20 ಸಾವಿರ ದಂಡ ವಿಧಿಸಿತು. ಜತೆಗೆ 1980 ರಿಂದ ಈ ವರೆಗೆ ಸಿಂಗ್ ಅವರ ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿಯನ್ನು ವಾರ್ಷಿಕ ಶೇಕಡಾ 6ರಷ್ಟು ಬಡ್ಡಿಯೊಂದಿಗೆ 12 ವಾರಗಳಲ್ಲಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿ ಆದೇಶ ಮಾಡಿತು.
ಪ್ರಕರಣದ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾರತ ಸರ್ಕಾರ ತೋರುತ್ತಿರುವ ಅಸಡ್ಡೆ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೇ ಇದು ದುಃಖದ ವಿಷಯ ಎಂದರು. ಪಿಂಚಣಿಗೆ ಸಂಬಂಧಿಸಿದಂತೆ ಈ ಹಿಂದೆ ಬಿಹಾರ ಸರ್ಕಾರವು ಅರ್ಜಿದಾರರ ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಮೂಲ ದಾಖಲೆಗಳನ್ನು ಕೇಂದ್ರ ಸರ್ಕಾರದ ಸಂಬಂಧ ಪಟ್ಟ ಇಲಾಖೆಗೆ ರವಾನೆ ಮಾಡಿತ್ತು. ಆದರೇ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆ ಆ ದಾಖಲೆಗಳನ್ನು ಕಳೆದುಕೊಂಡಿರುವುದಾಗಿ ನ್ಯಾಯ ಪೀಠದ ಗಮನಕ್ಕೆ ತರಲಾಯಿತು. ಈ ಅಂಶವನ್ನು ಗಮನಿಸಿದ ನ್ಯಾಯಪೀಠ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗರಂ ಆಯಿತಲ್ಲದೇ, ದಾಖಲೆಗಳನ್ನು ಕಳೆದುಕೊಂಡ ತಪ್ಪಿಗೆ ಕೇಂದ್ರ ಸರ್ಕಾರಕ್ಕೆ 20 ಸಾವಿರ ರೂ ದಂಡ ವಿಧಿಸಿ ಆದೇಶ ಮಾಡಿತು.
ಅಂದ ಹಾಗೆ ಸ್ವಾತಂತ್ರ್ಯ ಯೋಧ ಉತ್ತಮ್ ಲಾಲ್ ಸಿಂಗ್ ಅವರು ಕ್ವಿಟ್ ಇಂಡಿಯಾ ಚಳವಳಿ ಮತ್ತು ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇತರ ಚಳವಳಿಗಳಲ್ಲಿ ಭಾಗವಹಿಸಿದ್ದರು. ದೇಶ ಸ್ವಾತಂತ್ರ್ಯವನ್ನು ಪಡೆಯಲು ತಮ್ಮ ಬೆವರು ಮತ್ತು ರಕ್ತವನ್ನು ನೀಡಿದ್ದರು. ಇಂತಹ ಅನೇಕ ಹಿರಿಯರನ್ನು ನೆನಪಿಸಿಕೊಳ್ಳುವ ದೃಷ್ಟಿಯಿಂದ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಇದುವರೆಗೂ ಬದುಕಿರುವ ಹೋರಾಟಗಾರರನ್ನು ಗೌರವಿಸಲು ಭಾರತ ಸರ್ಕಾರವು 'ಸ್ವತಂತ್ರ ಸೈನಿಕ ಸಮ್ಮಾನ್' ಯೋಜನೆ ಜಾರಿಗೆ ತಂದಿತ್ತು.
ಇದನ್ನೂ ಓದಿ: ತನ್ನದೇ ನಿರ್ದೇಶಕರ ಕಂಪನಿಗಳಿಗೆ ಸಾಲ; ಐಸಿಐಸಿಐ ಬ್ಯಾಂಕ್ಗೆ ₹12 ಕೋಟಿ ದಂಡ ವಿಧಿಸಿದ ಆರ್ಬಿಐ