ಗಜಪತಿ(ಒಡಿಶಾ): ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ ತೀವ್ರ ಹತಾಶೆ ಹಾಗು ಕೋಪಗೊಂಡ ಅಭ್ಯರ್ಥಿಯೋರ್ವ ಐದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೇ ಬಂದ್ ಮಾಡಿದ್ದಾನೆ. ಒಡಿಶಾದ ಗಜಪತಿ ಜಿಲ್ಲೆಯ ಗಂಗಾಬಾದ್ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಗಜಪತಿ ಜಿಲ್ಲೆಯ ರಾಯಗಡ ಬ್ಲಾಕ್ನ ಗಂಗಾಬಾದ್ ಪಂಚಾಯಿತಿಯಲ್ಲಿ ಕಳೆದ 15 ವರ್ಷಗಳಿಂದ ಹರಿಬಂಧು ಕರ್ಜಿ ಕುಟುಂಬದ ಸದಸ್ಯರು ಜನರಿಂದ ಆಯ್ಕೆಯಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಚುನಾವಣೆಯಲ್ಲೂ ಕರ್ಜಿ ಕುಟುಂಬದ ಸದಸ್ಯನೋರ್ವ ಗೆಲುವು ದಾಖಲಿಸಿದ್ದಾನೆ. ಆದರೆ, ಚುನಾವಣೆಯಲ್ಲಿ ಸೋತ ಪರಾಜಿತ ವ್ಯಕ್ತಿಯೋರ್ವ ರಸ್ತೆ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ.
ಇದನ್ನೂ ಓದಿ: ಪುಟಿನ್ ಬಂಧಿಸುವ ರಷ್ಯಾ ಅಧಿಕಾರಿಗಳಿಗೆ ₹7.5 ಕೋಟಿ ಬಹುಮಾನ ಘೋಷಿಸಿದ ಉದ್ಯಮಿ
ಐದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಬಂಡೆ ಕಲ್ಲುಗಳನ್ನು ಇಡಲಾಗಿದ್ದು, ಮನುಷ್ಯರು ದಾಟಿ ಹೋಗಲು ಸಾಧ್ಯವಾಗದ ರೀತಿಯಲ್ಲಿ ಗುಂಡಿ ತೆಗೆದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಚುನಾಯಿತ ಅಭ್ಯರ್ಥಿ ಹಾಗೂ ಇತರೆ ಕೆಲವು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆ ಸಂಪರ್ಕವನ್ನು ಪುನರ್ ಕಲ್ಪಿಸಿದ್ದಾರೆಂದು ತಿಳಿದು ಬಂದಿದೆ.