ಮುಂಬೈ : ಏಳು ತಿಂಗಳ ಹಿಂದೆ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ವನ್ಯ ಜಿಂಕೆ ಮರಿಯೊಂದು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದು ಮನಸಿಗೆ ಸಮಾಧಾನ ತರುವ ಸಂಗತಿಯಾಗಿದೆ. ಗಾಯದಿಂದ ಪೂರ್ಣ ಆರಾಮವಾಗಿರುವ ಜಿಂಕೆಯನ್ನು ಸದ್ಯ ಥಾಣೆ ಕಾಡಿನಲ್ಲಿ ಬಿಡಲಾಗಿದೆ ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಮತ್ತು ಆಘಾತಕ್ಕೊಳಗಾದ ಹೆಣ್ಣು ಜಿಂಕೆಯೊಂದನ್ನು ಈ ವರ್ಷದ ಜನವರಿಯಲ್ಲಿ ಮಹಾರಾಷ್ಟ್ರ ಅರಣ್ಯ ಇಲಾಖೆ ರೇಂಜರ್ಗಳು ಥಾಣೆಯ ಟೋಕವಾಡೆ ಅರಣ್ಯ ವಲಯದಲ್ಲಿ ಪತ್ತೆ ಮಾಡಿದ್ದರು.
ಸುಮಾರು ಒಂಬತ್ತು ತಿಂಗಳ ವಯಸ್ಸಿನ ಜಿಂಕೆ ಗಂಭೀರ ಸ್ಥಿತಿಯಲ್ಲಿ ತೀವ್ರ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ಆರ್ಎಫ್ಓ ಪ್ರದೀಪ್ ರೌಂಡಾಲ್ ಅವರ ತಂಡವು ಚಿಕಿತ್ಸೆಗಾಗಿ ವನ್ಯಜೀವಿ ಎಸ್ಒಎಸ್ (ಡಬ್ಲ್ಯುಎಸ್ಒಎಸ್) ಪಶುವೈದ್ಯ ತಜ್ಞರ ಬಳಿಗೆ ಧಾವಿಸಿತು. ನಾಯಿ ಕಡಿತ ಅಥವಾ ಇತರ ಯಾವುದೋ ಪ್ರಾಣಿಯ ದಾಳಿಯಿಂದ ಜಿಂಕೆಯ ದೇಹಕ್ಕೆಲ್ಲ ಗಾಯಗಳಾಗಿವೆ ಎಂದು ಪಶುವೈದ್ಯರ ತಂಡ ಹೇಳಿತ್ತು. ಅಲ್ಲದೆ ಮೇಲಿನಿಂದ ಬಿದ್ದಿದ್ದರಿಂದ ಮೂಳೆ ಮುರಿತವೂ ಆಗಿತ್ತು.
ಜಿಂಕೆಯ ಗಂಭೀರ ಸ್ಥಿತಿಯನ್ನು ನೋಡಿದ ಪಶುವೈದ್ಯರು ಅದನ್ನು ಹೇಗಾದರೂ ಮಾಡಿ ಬದುಕಿಸಲೇಬೇಕೆಂದು ತೀರ್ಮಾನಿಸಿದರು. ಮೊದಲಿಗೆ ಜುನ್ನಾರ್ (ಪುಣೆ) ನಲ್ಲಿರುವ ಮಾಣಿಕ್ಡೋ ಚಿರತೆ ರಕ್ಷಣಾ ಕೇಂದ್ರದಲ್ಲಿ ಜಿಂಕೆಗೆ ಚಿಕಿತ್ಸೆ ನೀಡಲಾಯಿತು ಎಂದು ಡಬ್ಲ್ಯುಎಸ್ಒಎಸ್ ನ ಪಶುವೈದ್ಯ ಅಧಿಕಾರಿ ಡಾ. ಚಂದನ್ ಸಾವನೆ ತಿಳಿಸಿದ್ದಾರೆ.
ಇದನ್ನೂ ಓದಿ : ಜಿಂಕೆ ರಕ್ಷಣೆಗೆ ಕ್ರಮ: ಮಾಂಸಹಾರಿ ಪ್ರಾಣಿಗಳಿಲ್ಲದ ಸಂರಕ್ಷಿತ ಪ್ರದೇಶಕ್ಕೆ ಬಿಡುಗಡೆ- ವಿಡಿಯೋ
"ನಾವು ಮೊದಲು ಫೈಬರ್ ಗ್ಲಾಸ್ ಪ್ಲಾಸ್ಟರ್ ಹಾಕಿದ್ದೆವು. ಆದರೆ ಅದರಿಂದ ನಿರೀಕ್ಷಿತ ಪರಿಣಾಮವಾಗಲಿಲ್ಲ. ಹೀಗಾಗಿ ಜಿಂಕೆಯ ಕಾಲಿಗೆ ಆಪರೇಶನ್ ಮಾಡಿದೆವು. ನಂತರ ಅದಕ್ಕೆ ಸರಿಯಾಗಿ ನಡೆಯಲು ಆಗುತ್ತದೆಯಾ ಇಲ್ಲವಾ ಎಂಬುದನ್ನು ನೋಡಲು ಅದನ್ನು ಸುಮಾರು ತಿಂಗಳವರೆಗೆ ನಿಗಾದಲ್ಲಿ ಇಟ್ಟುಕೊಂಡಿದ್ದೆವು" ಎಂದು ಡಾ. ಸಾವನೆ ಹೇಳಿದರು.
ತಿಂಗಳುಗಳ ವ್ಯಾಪಕ ಚಿಕಿತ್ಸೆ ಮತ್ತು ಪ್ರೀತಿಯ ಆರೈಕೆಯ ನಂತರ ಜಿಂಕೆಯು ಅಂತಿಮವಾಗಿ ಪವಾಡಸದೃಶವಾಗಿ ಚೇತರಿಸಿಕೊಂಡಿದೆ. ಮತ್ತೆ ತನ್ನ ಕಾಲುಗಳ ಮೇಲೆ ನಡೆಯುತ್ತ ಜಿಂಕೆ ಕಾಡಿಗೆ ಮರಳಿದೆ ಎಂದು ಡಬ್ಲ್ಯುಎಸ್ಒಎಸ್ನ ಸಿಇಒ ಮತ್ತು ಸಹ-ಸಂಸ್ಥಾಪಕ ಕಾರ್ತಿಕ್ ಸತ್ಯನಾರಾಯಣ್ ಹೇಳಿದರು. "ಇದು ಈ ವರ್ಷ ಮಹಾರಾಷ್ಟ್ರದಲ್ಲಿ ವನ್ಯ ಪ್ರಾಣಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ ಮೂರನೇ ಪ್ರಕರಣವಾಗಿದೆ. ಈ ಹಿಂದೆ ನಾವು ಗಾಯಗೊಂಡ ಶಿಕ್ರಾ ಪಕ್ಷಿ ಮತ್ತು ಚಿಂಕಾರಾವನ್ನು ಮತ್ತೆ ಕಾಡಿಗೆ ಕಳುಹಿಸುವ ಮೊದಲು ಅವಕ್ಕೆ ಚಿಕಿತ್ಸೆ ನೀಡಿದ್ದೆವು" ಎಂದು ಸತ್ಯನಾರಾಯಣ್ ಹೇಳಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಡಬ್ಲ್ಯುಎಸ್ಒಎಸ್ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ದೇಶಾದ್ಯಂತ ಸಂಕಷ್ಟದಲ್ಲಿರುವ ಕಾಡು ಪ್ರಾಣಿಗಳನ್ನು ರಕ್ಷಿಸಲು ಮತ್ತು ಪುನರ್ವಸತಿ ಕಲ್ಪಿಸಲು, ಕಳ್ಳಬೇಟೆ, ಅಕ್ರಮ ವನ್ಯಜೀವಿ ವ್ಯಾಪಾರ ಇತ್ಯಾದಿಗಳನ್ನು ತಡೆಗಟ್ಟಲು 1998 ರಲ್ಲಿ ದತ್ತಿ ಡಬ್ಲ್ಯುಎಸ್ಒಎಸ್ ಅನ್ನು ರಚಿಸಲಾಯಿತು.
ಇದನ್ನೂ ಓದಿ : India Inflation:ಚಿಲ್ಲರೆ ಹಣದುಬ್ಬರ ಶೇ 6.7ಕ್ಕೆ ಏರಿಕೆ ಸಾಧ್ಯತೆ; ಅರ್ಥಶಾಸ್ತ್ರಜ್ಞರ ಅಂದಾಜು