ನವದೆಹಲಿ: ಚುನಾವಣಾ ತಂತ್ರಗಾರ, ಚಾಣಕ್ಯ ಎಂದೇ ಹೆಸರುವಾಸಿಯಾಗಿರುವ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(CWC) ನಿರ್ಧಾರ ಕೈಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆ ಬಗ್ಗೆ ಕಾಂಗ್ರೆಸ್ಗೆ ಗೊಂದಲ
ಆಗಸ್ಟ್ನಲ್ಲಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರಶಾಂತ್ ಕಿಶೋರ್, ರಾಹುಲ್ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜತೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದರು. ಆದರೆ, ಈವರೆಗೂ ಪ್ರಶಾಂತ್ ಕಿಶೋರ್ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೋ? ಬೇಡವೋ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಪಕ್ಷದ ಸದಸ್ಯರ ಅಭಿಪ್ರಾಯ ತಿಳಿಯಲು ಸಮಿತಿಯನ್ನು ರಚಿಸಲಾಗಿದೆ.
ಹಿರಿಯರ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚನೆ
ಎ.ಕೆ. ಆ್ಯಂಟನಿ, ಅಂಬಿಕಾ ಸೋನಿ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನೊಳಗೊಂಡ ಸಮಿತಿಯು ಪಕ್ಷದ ಹಿರಿಯ ನಾಯಕರೊಂದಿಗೆ ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆ ವಿಚಾರವಾಗಿ ಚರ್ಚಿಸಲಿದ್ದಾರೆ. ಬಳಿಕ ವರದಿಯನ್ನು ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ನೀಡಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆ ವಿಚಾರ ಮಾತ್ರವಲ್ಲದೆ, ಮುಂದಿನ ಸಾರ್ವತ್ರಿಕ ಚುನಾವಣೆಗೂ ಮುನ್ನ ತರಬೇಕಾದ ಬದಲಾವಣೆಗಳ ಮಧ್ಯೆ ಸಮಿತಿ, ಹಿರಿಯ ನಾಯಕರ ಅಭಿಪ್ರಾಯ ಪಡೆಯಲಿದೆ.
ಕಾಂಗ್ರೆಸ್ ಸೇರ್ಪಡೆಗೆ ಪ್ರಶಾಂತ್ ಉತ್ಸುಕ
ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವಿನ ಹಿಂದೆ ಪ್ರಶಾಂತ್ ಕಿಶೋರ್ ಪಾತ್ರ ಬಹಳ ಮುಖ್ಯವಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಮುಂದಿನ ದಿನಗಳಲ್ಲಿ ತಾನು ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಪ್ರಶಾಂತ್ ಘೋಷಿಸಿದ್ದರು. ಕೆಲ ದಿನಗಳ ಬಳಿಕ ಅವರು ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ಸೇರ್ಪಡೆಗೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂತು.
‘ಮೈತ್ರಿ ಬಗ್ಗೆ ನಿರ್ಧರಿಸುವ ಹಕ್ಕು ನನಗೆ ನೀಡಿ’
ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ನಲ್ಲಿ ಚುನಾವಣಾ ತಂತ್ರ ಮತ್ತು ಮೈತ್ರಿಗಳ ಜವಾಬ್ದಾರಿ ನೀಡಬೇಕೆಂದು ರಾಹುಲ್ ಗಾಂಧಿ ಮುಂದೆ ಪ್ರಸ್ತಾಪಿಸಿದ್ದಾರೆ ಎನ್ನಲಾಗ್ತಿದೆ. ಅಂದರೆ, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಮೈತ್ರಿಯ ಬಗ್ಗೆ ನಿರ್ಧರಿಸುವ ಸಂಪೂರ್ಣ ಹಕ್ಕು ಪ್ರಶಾಂತ್ ಅವರಿಗಿರುತ್ತದೆ.
ಪ್ರಶಾಂತ್ ಪಕ್ಷ ಸೇರ್ಪಡೆ ಕಾಂಗ್ರೆಸ್ಗೆ ನುಂಗಲಾರದ ತುತ್ತು
ಆಂತರಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಕಾಂಗ್ರೆಸ್, ಈ ನಿರ್ಧಾರ ಕೈಗೊಳ್ಳುವುದು ಅಪಾಯಕಾರಿ ಎಂದು ಭಾವಿಸಿದೆ. ಇತ್ತೀಚೆಗೆ, ಜಿ 23 ನಾಯಕರ ಸಭೆ, ಸಾಂಸ್ಥಿಕ ಪರಿಷ್ಕರಣೆಗೆ ಆಗ್ರಹಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಅಲ್ಲಿ ಪಕ್ಷದ ಬಹುಪಾಲು ನಾಯಕರು ಪ್ರಶಾಂತ್ ಕಿಶೋರ್ಗೆ ಪಕ್ಷದೊಳಗೆ ಜವಾಬ್ದಾರಿ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದರು.
ನಮ್ಮಲ್ಲೇ ಸಾಕಷ್ಟು ಪ್ರತಿಭೆಗಳಿವೆ- ಹಿರಿಯ ನಾಯಕರ ಅಸಮಾಧಾನ
ಬದಲಾಗಿ, ಪಕ್ಷವು ಅಂತಹ ವಿಷಯಗಳ ಬಗ್ಗೆ ಪಕ್ಷದ ಸದಸ್ಯರೊಂದಿಗೆ ಮಾತನಾಡುವುದು ಅಗತ್ಯವಾಗಿದೆ. ನಮ್ಮದೇ ಪಕ್ಷದೊಳಗೆ ಸಾಕಷ್ಟು ಪ್ರತಿಭೆಗಳಿವೆ. ಅನೇಕ ಅನುಭವಿ ನಾಯಕರೂ ಇದ್ದಾರೆ. ಪಕ್ಷವು ಅವರನ್ನು ಸಂಪರ್ಕಿಸಿ, ಅಭಿಪ್ರಾಯಗಳನ್ನು ಪಡೆಯಬೇಕು ಎಂದು ನಾಯಕರು ಹೈಕಮಾಂಡ್ಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ ಉಚಿತ ಪೆಟ್ರೋಲ್ ವಿತರಣೆ...ಯಾಕೆ ಗೊತ್ತಾ?