ಉನ್ನಾವೋ(ಉತ್ತರ ಪ್ರದೇಶ) : ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಪಾರ್ಕ್ವೊಂದರಲ್ಲಿ ಲವರ್ಸ್ಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ಶವಗಳು ಒಟ್ಟಿಗೆ ನೇತಾಡುತ್ತಿರುವುದು ಕಂಡು ಬಂದಿದ್ದು, ಈ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ಉನ್ನಾವೋದ ಮಿಶ್ರಿಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯ ಮದುವೆಗೆ ಕುಟುಂಬಸ್ಥರು ನಿರಾಕರಣೆ ಮಾಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಕುಟುಂಬಸ್ಥರಿಂದ ಮದುವೆಗೆ ನಿರಾಕರಣೆ ಉಂಟಾಗಿತ್ತು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದರ ಬೆನ್ನಲ್ಲೇ ಇಬ್ಬರು ಒಟ್ಟಿಗೆ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಂಗಳವಾರ ಪಾರ್ಕ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಶವಗಳನ್ನ ವಶಕ್ಕೆ ಪಡೆದುಕೊಂಡು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಇದೊಂದು ಆತ್ಮಹತ್ಯೆ ಎಂದು ಪೊಲೀಸರು ಪರಿಗಣಸಿದ್ದಾರೆ. ಆದರೆ, ಕೆಲವು ಗ್ರಾಮಸ್ಥರು ಮರ್ಯಾದಾ ಹತ್ಯೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟು ಸೋತ ಗಂಡ.. ಹಣ ನೀಡದಕ್ಕಾಗಿ 'ತಲಾಖ್' ನೀಡಿದ!
ಉನ್ನಾವೋ ಪೊಲೀಸ್ ಠಾಣೆಯ ಮಿಶ್ರಿಗಂಜ್ ಪ್ರದೇಶದ ನಿವಾಸಿ ಸೌರಭ್ ಕಾನ್ಪುರದ ಆಶಿಕಾ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಈ ವೇಳೆ ವಿರೋಧ ವ್ಯಕ್ತವಾಗಿತ್ತು. ಸೋಮವಾರ ಬೆಳಗ್ಗೆ ಶಾಲೆಗೆ ಹೋಗಿ ಬರುವುದಾಗಿ ಹೇಳಿದ್ದ ಆಶಿಕಾ ಮನೆಯಿಂದ ಹೊರ ಬಂದಿದ್ದಳು.
ಸೌರಭ್ ಕೂಡ ಮನೆಯಿಂದ ಹೊರಗಡೆ ಬಂದಿದ್ದ. ಸಂಜೆಯಾದ್ರೂ ಇಬ್ಬರು ಮನೆಗೆ ಹಿಂದಿರುಗಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ದೂರು ದಾಖಲು ಮಾಡಿದ್ದರು. ಮಂಗಳವಾರ ಇಬ್ಬರ ಶವ ಒಂದೇ ಸ್ಥಳದಲ್ಲಿ ಪತ್ತೆಯಾಗಿದೆ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇದೇ ವಿಚಾರವಾಗಿ ಮಾತನಾಡಿರುವ ಉನ್ನಾವೋ ಎಸ್ಪಿ, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.