ನವದೆಹಲಿ : ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಇಂದು ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣದಿಂದ ಇಂಫಾಲ್‌ಗೆ ತೆರಳಿದ್ದಾರೆ. ಮಣಿಪುರ ಸರ್ಕಾರವು ಸ್ವಾತಿ ಅವರ ಭೇಟಿಯನ್ನು ಮುಂದೂಡುವಂತೆ ಸೂಚಿಸಿದ್ದರೂ ಕೂಡ ಡಿಸಿಡಬ್ಲ್ಯು ಅಧ್ಯಕ್ಷರು ನಿಗದಿತ ಯೋಜನೆಯಂತೆ ಪ್ರಯಾಣ ಬೆಳೆಸಿದ್ದಾರೆ.
ಈ ಕುರಿತು ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸ್ವಾತಿ ಮಲಿವಾಲ್, "ನಾನು ಮಣಿಪುರ ರಾಜ್ಯಕ್ಕೆ ತೆರಳಿ ಲೈಂಗಿಕ ಕಿರುಕುಳದ ಸಂತ್ರಸ್ತೆಯರನ್ನು ಭೇಟಿ ಮಾಡಲು ಮುಂದಾಗಿದ್ದೇನೆ. ಈ ಕುರಿತು ಮಣಿಪುರ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದೇನೆ. ಅಲ್ಲಿನ ರಾಜ್ಯ ಸರ್ಕಾರದಿಂದ ನನಗೆ ಮರು ಪತ್ರವೊಂದು ಬಂದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣ ಭೇಟಿಯನ್ನು ಮುಂದೂಡುವಂತೆ ಸೂಚಿಸಿದೆ. ಆದರೆ, ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ನಾನು ಮಣಿಪುರಕ್ಕೆ ಹೋಗಲು ನಿರ್ಧರಿಸಿದ್ದೇನೆ, ಭೇಟಿಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ" ಎಂದರು.
ಇದನ್ನೂ ಓದಿ : ಮಣಿಪುರ ಘಟನೆಗೆ ಕಾರಣರಾದ ದುರುಳರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಿ: ಹರ್ಭಜನ್ ಸಿಂಗ್
"ನನ್ನನ್ನು ತಡೆಯಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಜೊತೆಗೆ, ಲೈಂಗಿಕ ಕಿರುಕುಳದ ಸಂತ್ರಸ್ತರನ್ನು ಭೇಟಿಯಾಗಲು ಸರ್ಕಾರ ವ್ಯವಸ್ಥೆ ಮಾಡಬೇಕು. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಸಹ ಇಂತಹ ಪ್ರಕರಣಗಳು ಕಂಡು ಬಂದರೆ ಅಲ್ಲಿಗೂ ಕೂಡ ಭೇಟಿ ನೀಡುತ್ತೇನೆ. ಸಾಮಾಜಿಕ ಕಾರ್ಯಕರ್ತೆಯಾಗಿ ಮಣಿಪುರಕ್ಕೆ ತೆರಳುತ್ತಿದ್ದೇನೆ, ನಾನು ಯಾವುದೇ ಸಮಸ್ಯೆ ಸೃಷ್ಟಿಸುವುದಿಲ್ಲ" ಎಂದು ಭರವಸೆ ನೀಡಿದರು.
ಇದನ್ನೂ ಓದಿ : 'ಇಂಟರ್‌ನೆಟ್ ನಿಷೇಧ ವಾಪಸ್ ಪಡೆದರೆ ಇನ್ನಷ್ಟು ಆಘಾತಕಾರಿ ವಿಡಿಯೋಗಳು ಬೆಳಕಿಗೆ': ಮಣಿಪುರ ಸಂಸದ ಲೋರೋಹ್ ಪಿಫೋಜ್
ಮೇ 4ರಂದು ಕಾಂಗ್‌ಪೊಕ್ಸಿ ಜಿಲ್ಲೆಯ ಫೈನೋಮ್ ಗ್ರಾಮದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸ್ವಾತಿ ಅವರು ತಮ್ಮ ಭೇಟಿಯ ಕುರಿತು ಮಣಿಪುರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದಾರೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮಣಿಪುರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ: ಬಾಲಾಪರಾಧಿ ಸೇರಿ 6 ಮಂದಿ ಸೆರೆ, ವಲಸೆ ಹೋಗದಂತೆ ಸರ್ಕಾರದ ಮನವಿ
ಮಣಿಪುರದ ಡಿಜಿಪಿಗೆ ಬರೆದ ಪತ್ರದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರಕ್ಕೆ ಸತ್ಯಶೋಧನಾ ವರದಿಯನ್ನು ಸಲ್ಲಿಸಲು ಮತ್ತು ಸಂತ್ರಸ್ತರು ವಾಸಿಸುತ್ತಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಡಿಯೋದಲ್ಲಿ ಕಾಣಿಸಿಕೊಂಡವರ ಶೋಧ ನಡೆಸುತ್ತಿರುವ ಪೊಲೀಸರು ಈವರೆಗೆ ಬಾಲಾಪರಾಧಿ ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಹಲವರು ಕಣ್ಮರೆಯಾಗಿದ್ದು, ಶಂಕಿತ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ.