ಹೈದರಾಬಾದ್ (ತೆಲಂಗಾಣ): ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ''ಸಂಸತ್ತಿನಲ್ಲಿ ಬಿಜೆಪಿ ಸಂಸದರೊಬ್ಬರು ಮುಸ್ಲಿಂ ಸಂಸದರನ್ನು ನಿಂದಿಸುವುದನ್ನು ನಾವು ಕಂಡಿದ್ದೇವೆ. ಸಂಸತ್ತಿನಲ್ಲಿ ಇದನ್ನೆಲ್ಲಾ ಹೇಳಬಾರದಿತ್ತು ಎಂದು ಜನ ಹೇಳುತ್ತಿದ್ದರೂ ಅವರು ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ನೀವು ಮತ ಹಾಕಿದ ಸಾರ್ವಜನಿಕ ಪ್ರತಿನಿಧಿಗಳು ಇವರು. ದೇಶದ ಸಂಸತ್ತಿನಲ್ಲಿ ಮುಸಲ್ಮಾನರ ಮೇಲೆ ಗುಂಪು ಹಲ್ಲೆ ನಡೆಯುವ ದಿನ ದೂರವಿಲ್ಲ ಎಂದು ಓವೈಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಸಂಸದೀಯ ಕ್ಷೇತ್ರವಾದ ಹೈದರಾಬಾದ್‌ನಲ್ಲಿ ಭಾನುವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರನ್ನು ಗುರಿಯಾಗಿಸಿ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಭಾರತೀಯ ಜನತಾ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಓವೈಸಿ, ''ನಿಮ್ಮ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಲ್ಲಿದೆ? ಈ ಕುರಿತು ಪ್ರಧಾನಿ ಒಂದು ಮಾತನ್ನೂ ಆಡಿಲ್ಲ. ಬಿಜೆಪಿ ಸಂಸದರೊಬ್ಬರು ಮುಸ್ಲಿಂ ಸಂಸದರನ್ನು ಸದನದಲ್ಲಿ ನಿಂದಿಸುತ್ತಾರೆ ಎಂದ ಅವರು, ದೇಶದ ಸಂಸತ್ತಿನಲ್ಲಿ ಮುಸಲ್ಮಾನರ ಮೇಲೆ ಗುಂಪು ಹಲ್ಲೆ ನಡೆಯುವ ದಿನ ದೂರವಿಲ್ಲ'' ಎಂದು ಆತಂಕ ವ್ಯಕ್ತಪಡಿಸಿದರು.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಡ್ಯಾನಿಶ್ ಅಲಿ ವಿರುದ್ಧ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆಗಳು ವಿರೋಧ ಪಕ್ಷಗಳ ಕೋಪಕ್ಕೆ ಕಾರಣವಾಗಿದ್ದು, ಬಿಜೆಪಿ ಸಂಸದರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಸ್ಪೀಕರ್ ಈ ಬಗ್ಗೆ ವಿಚಾರಣೆ ನಡೆಸದಿದ್ದರೆ ಸಂಸತ್ತನ್ನು ತೊರೆಯುವುದಾಗಿ ಅಲಿ ಬೇಡಿಕೆ ಇಟ್ಟಿದ್ದರು. ಏತನ್ಮಧ್ಯೆ, ಅಲಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ಕರೆದ ನಂತರ ಅವರ ಸಹ ಪಕ್ಷದ ಶಾಸಕರು 'ಪ್ರಚೋದನೆಗೆ ಒಳಗಾಗಿದ್ದಾರೆ' ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶನಿವಾರ ಹೇಳಿದ್ದರು.
ಸಲ್ಮಾನ್ ಖುರ್ಷಿದ್ ಗರಂ: ಇದಕ್ಕೂ ಮುನ್ನ ಶುಕ್ರವಾರ ಕಾಂಗ್ರೆಸ್, ಎನ್‌ಸಿಪಿ, ಟಿಎಂಸಿ ಮತ್ತು ಡಿಎಂಕೆ ನಾಯಕರು ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಈ ವಿಷಯವನ್ನು ಸಂಸದೀಯ ವಿಶೇಷಾಧಿಕಾರ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದರು. ಶನಿವಾರ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಬಿಜೆಪಿಯು ಇತರರನ್ನು ಯಾವುದೇ ಸಮಯದಲ್ಲಿ ಅಮಾನತುಗೊಳಿಸುತ್ತದೆ ಎಂದು ತಿಳಿಸಿದ್ದರು. ''ಬಿಜೆಪಿ ನಾಯಕರು ಮತ್ತೆ ಮತ್ತೆ ಈ ರೀತಿ ಮಾತನಾಡಲು ಕಾರಣವೇನು? ಸಂಸತ್ತಿನಲ್ಲಿ ಹೇಳುತ್ತಿದ್ದಂತೆಯೇ ಈ ವಿಚಾರ ಬೆಳಕಿಗೆ ಬಂದಿದೆ. ಮಾಧ್ಯಮಗಳ ಮುಂದೆ ಇದೇ ರೀತಿ ಮಾತನಾಡುತ್ತಾರೆ. ಅವರು ಯಾವುದೇ ಸಮಯದಲ್ಲಿ ಇತರರನ್ನು ಅಮಾನತುಗೊಳಿಸುತ್ತಾರೆ. ಈ ವಿಷಯದಲ್ಲಿ ಅವರು ಸಮಯ ತೆಗೆದುಕೊಳ್ಳುತ್ತಿದ್ದಾರೆ" ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದ್ದರು. ''ಬಿಜೆಪಿ ಸಂಸದರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವ ಅಗತ್ಯವಿದೆ'' ಎಂದು ಸಂಸದ ಮತ್ತು ಡಿಎಂಕೆ ನಾಯಕ ಡಾ.ತಮಿಳಚಿ ತಂಗಪಾಂಡಿಯನ್ ಕಿಡಿಕಾರಿದ್ದರು.
ಇದನ್ನೂ ಓದಿ: 2024ರಲ್ಲಿ ಅಧಿಕಾರಕ್ಕೆ ಬಂದರೆ 'ಮಹಿಳಾ ಮೀಸಲಾತಿ ಮಸೂದೆ'ಗೆ ತಿದ್ದುಪಡಿ: ಮಲ್ಲಿಕಾರ್ಜುನ ಖರ್ಗೆ