ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲಿದ್ದು, ತಮ್ಮ ತಂದೆಗೆ ರೋಹಿಣಿ ಕಿಡ್ನಿ ದಾನ ಮಾಡಲಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರಿ ರೋಹಿಣಿ ಆಚಾರ್ಯ ಅವರ ಮೂತ್ರಪಿಂಡವನ್ನು ಅವರಿಗೆ ಕಸಿ ಮಾಡಲಾಗುವುದು. ಈಗ ರೋಹಿಣಿ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಲಾಲು ಅವರು ಅಕ್ಟೋಬರ್‌ನಲ್ಲಿ ಸಿಂಗಾಪುರಕ್ಕೆ ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹೀಗಾಗಿ ತಂದೆಗೆ ಕಿಡ್ನಿ ದಾನ ಮಾಡಲು ರೋಹಿಣಿ ಮುಂದಾಗಿದ್ದಾರೆ.
ಇನ್ನು, ಲಾಲು ತಮ್ಮ ಜೀವ ಉಳಿಸಿಕೊಳ್ಳಲು ಮಗಳ ಮೂತ್ರಪಿಂಡವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಕುಟುಂಬದ ಸದಸ್ಯರೊಬ್ಬರ ಕಿಡ್ನಿ ಕಸಿ ಮಾಡಿದರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದ್ದರಿಂದ ಮಗಳ ಒತ್ತಾಯಕ್ಕೆ ಮಣಿದು ಲಾಲು ಒಪ್ಪಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ಲಾಲು ನವೆಂಬರ್ 20 ರಿಂದ 24ರ ನಡುವೆ ಸಿಂಗಾಪುರಕ್ಕೆ ತೆರಳುವ ಸಾಧ್ಯತೆ ಇದೆ.
ಕಳೆದ ಕೆಲವು ವರ್ಷಗಳಿಂದ, ಲಾಲು ತಮ್ಮ ಮೂತ್ರಪಿಂಡ ಮತ್ತು ಹೃದಯದ ತೊಂದರೆಯಿಂದಾಗಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ವೈದ್ಯರು ಅವರಿಗೆ ಮೂತ್ರಪಿಂಡ ಕಸಿ ಮಾಡುವಂತೆ ಸೂಚಿಸಿಲ್ಲ. ಆದರೆ ತಂದೆಯ ಆರೋಗ್ಯದ ಬಗ್ಗೆ ತುಂಬಾ ಚಿಂತಿತರಾಗಿದ್ದ ರೋಹಿಣಿ ಅವರನ್ನು ಸಿಂಗಾಪುರದ ವೈದ್ಯಕೀಯ ತಂಡಕ್ಕೆ ತೋರಿಸಿದ್ದಾರೆ. ಲಾಲು ಅವರಿಗೆ ಕಿಡ್ನಿ ಕಸಿ ಮಾಡುವಂತೆ ಸೂಚಿಸಿದರು. ಲಾಲು ಅವರ ಕಿಡ್ನಿ ಆಪರೇಷನ್ ನವೆಂಬರ್‌ನಲ್ಲಿ ನಡೆಯಲಿದೆ ಎಂದು ಅವರ ಪುತ್ರ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಸದ್ಯ ಲಾಲು ದೆಹಲಿಯಲ್ಲಿರುವ ತಮ್ಮ ಹಿರಿಯ ಮಗಳು ಮೀಸಾಭಾರತಿ ಅವರ ಮನೆಯಲ್ಲಿ ತಂಗಿದ್ದಾರೆ.
ಓದಿ: ಕಿಡ್ನಿ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಬಂದ ಲಾಲೂ ಪ್ರಸಾದ್ ಯಾದವ್