ರುದ್ರಪ್ರಯಾಗ: ಇಂದು ಮಹಾಶಿವರಾತ್ರಿ ಹಬ್ಬ. ಈ ಸಂದರ್ಭದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಮುಖ ಮತ್ತು ಹಿಮಾಲಯದ ಮಡಿಲಲ್ಲಿರುವ ಭಗವಾನ್ ಕೇದಾರನಾಥನ ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅಲ್ಲಿನ ಅರ್ಚಕರು ಹೇಳಿದ್ದಾರೆ. ಇದರ ಜೊತೆಗೆ ಪಂಚಮುಖಿ ಚರ ದೇವರ ಉತ್ಸವ ಡೋಲಿಯು ಉಖಿಮಠದಿಂದ ಕೈಲಾಸಕ್ಕೆ ಹೊರಡುವ ದಿನಾಂಕವನ್ನೂ ಘೋಷಿಸುವುದಾಗಿ ಹೇಳಲಾಗಿದೆ.
ಇಂದು ಓಂಕಾರೇಶ್ವರ ದೇವಸ್ಥಾನದಲ್ಲಿ ಪಂಚಾಂಗದ ಲೆಕ್ಕಾಚಾರದ ಪ್ರಕಾರ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ವಿದ್ವಾಂಸರು ಮತ್ತು ಸ್ವಾಮೀಜಿಗಳ ಸಮ್ಮುಖದಲ್ಲಿ ದಿನಾಂಕ ಘೋಷಿಸಲಾಗುವುದು ಎಂದು ಹೇಳಲಾಗಿದೆ. ಬಾಗಿಲು ತೆರೆಯುವ ದಿನಾಂಕವನ್ನು ಘೋಷಿಸಲು ದೇವಾಲಯ ಸಮಿತಿಯು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ತಿಳಿದು ಬಂದಿದೆ. ಕೇದಾರನಾಥನ ಚಳಿಗಾಲದ ಆವಾಸಸ್ಥಾನ ಓಂಕಾರೇಶ್ವರ ದೇವಾಲಯವನ್ನು ಎಂಟು ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದ್ದು, ಕೇದಾರನಾಥ ದೇಗುಲವು ಹಿಮದಿಂದ ಆವೃತವಾಗಿದೆ, ಅಲ್ಲಿ 5 ಅಡಿಗಳಷ್ಟು ಹಿಮ ತುಂಬಿರುವುದಾಗಿ ಹೇಳಲಾಗಿದೆ.
ಭಗವಾನ್ ಕೇದಾರನಾಥನ ಬಾಗಿಲು ತೆರೆಯುವ ದಿನಾಂಕದ ಘೋಷಣೆ ಸಮಯದಲ್ಲಿ, ಕೋವಿಡ್ 19ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಕ್ತರಿಂದ ಪೂಜೆ, ಜಲಾಭಿಷೇಕ, ಭಜನಾ ಸಂಕೀರ್ತನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ಮಹಾಶಿವರಾತ್ರಿ ಹಬ್ಬದಂದು ಕೇದಾರನಾಥ ದೇವರ ಬಾಗಿಲು ತೆರೆಯುವ ದಿನಾಂಕ ಮತ್ತು ಪಂಚಮುಖಿ ಚರ ದೇವರ ಉತ್ಸವ ಡೋಲಿಯನ್ನು ಉಖಿಮಠದಿಂದ ಕೈಲಾಸಕ್ಕೆ ಹೊರಡುವ ದಿನಾಂಕವನ್ನು ಪಂಚಾಂಗದ ಲೆಕ್ಕಾಚಾರದ ಪ್ರಕಾರ ಪ್ರಕಟಿಸಲಾಗುವುದು ಎಂದು ಪ್ರಧಾನ ಅರ್ಚಕ ಬಾಗೇಶ್ ಲಿಂಗ್ ತಿಳಿಸಿದ್ದಾರೆ. ಭಗವಾನ್ ಕೇದಾರನಾಥನ ಬಾಗಿಲು ತೆರೆಯುತ್ತಿರುವುದರಿಂದ ಈ ವರ್ಷ ಸ್ಥಳೀಯ ಯಾತ್ರಾರ್ಥಿಗಳಲ್ಲಿ, ವರ್ತಕರಲ್ಲಿ ಉತ್ಸಾಹ ಮೂಡಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಕೇದಾರನಾಥ, ಮದ್ಮಹೇಶ್ವರ, ವಿಶ್ವನಾಥ ದೇವಸ್ಥಾನ, ಗುಪ್ತಕಾಶಿ ಮತ್ತು ಓಂಕಾರೇಶ್ವರ ದೇವಸ್ಥಾನಗಳಲ್ಲೂ ಪ್ರಧಾನ ಅರ್ಚಕರನ್ನು ನಿಯೋಜಿಸಲಾಗುವುದು ಎಂದು ಹೇಳಿದೆ.
ಓದಿ :ಮಹಾಶಿವರಾತ್ರಿಗೆ ಡಾರ್ಲಿಂಗ್ ಪ್ರಭಾಸ್ ಗುಡ್ ನ್ಯೂಸ್ ; ಆದಿಪುರುಷ್ ಚಿತ್ರ ಬಿಡುಗಡೆಯ ದಿನಾಂಕ ರಿವೀಲ್