ಪಾಟ್ನಾ: ಬಿಹಾರದ ದಲಿತರು ಮತ್ತು ಮಹಾದಲಿತರು ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಶುಕ್ರವಾರ ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಶಕಕ್ಕೂ ಹೆಚ್ಚು ಕಾಲದಿಂದ ರಾಜಕಾರಣಿಗಳು ಈ ಎರಡು ಸಮುದಾಯಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ದಲಿತರು ಮತ್ತು ಮಹಾದಲಿತರ ಸ್ಥಿತಿ ನಿಜವಾಗಿಯೂ ಶೋಚನೀಯವಾಗಿದೆ. ಅವರು ಅಮಾನವೀಯ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ. ಅವರ ಮನೆಗಳಲ್ಲಿ ಅವರಿಗೆ ಮಲಗಲು ಒಂದು ಕಟ್ಟಿಗೆಯ ಪಲ್ಲಂಗವೂ ಇಲ್ಲ. ಅವರು ನೆಲದ ಮೇಲೆಯೇ ಮಲಗುತ್ತಾರೆ. ನಾನು ಅವರ ಮನೆ ಮತ್ತು ಹೊಲಗಳಿಗೆ ಭೇಟಿ ನೀಡಿದಾಗಲೆಲ್ಲಾ ಇದನ್ನು ಕಂಡಿದ್ದೇನೆ.
ಮಳೆಗಾಲದಲ್ಲಿ ಗುಡಿಸಲಿನಲ್ಲಿಯೇ ಮೂರ್ನಾಲ್ಕು ತಿಂಗಳು ಮರದ ತುಂಡುಗಳ ಮೇಲೆ ಜೀವನ ನಡೆಸುತ್ತಾರೆ. ಇದು ಬಿಹಾರದ ಸ್ಥಿತಿ. ಆದರೆ ಬಿಹಾರ ರಾಜಕಾರಣಿಗಳು ಕಳೆದ 10 ರಿಂದ 12 ವರ್ಷಗಳಿಂದ ದಲಿತರು ಮತ್ತು ಮಹಾದಲಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಶೋರ್ ಹೇಳಿದರು.
3500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪಾದಯಾತ್ರೆ ಮಾಡಿ ಪ್ರತಿ ಪಂಚಾಯತ್ ಮತ್ತು ಬ್ಲಾಕ್ಗಳಿಗೆ ತಲುಪಿ ರಾಜ್ಯದ ರಾಜಕೀಯವನ್ನು ಸುಧಾರಿಸಲು ಪ್ರಶಾಂತ್ ಕಿಶೋರ್ ಮುಂದಾಗಿದ್ದಾರೆ. ತಳಮಟ್ಟದಲ್ಲಿ ಸೂಕ್ತ ವ್ಯಕ್ತಿಗಳನ್ನು ಗುರುತಿಸಲು ಪಾದಯಾತ್ರೆ ನಡೆಸುತ್ತಿದ್ದಾರೆ.
ಒಂದು ಅಧಿಕಾರಶಾಹಿ ಮತ್ತು ಇನ್ನೊಂದು ಭ್ರಷ್ಟಾಚಾರ. ಈ ಎರಡು ವಿಷಯಗಳು ಎಲ್ಲೆಡೆ ಸಾಮಾನ್ಯವಾಗಿವೆ. ಜನ ಸಾಮಾನ್ಯರಾಗಲಿ, ಜನಪ್ರತಿನಿಧಿಗಳಾಗಲಿ, ಎಲ್ಲೆಂದರಲ್ಲಿ ಅಧಿಕಾರಶಾಹಿಯು ಇಡೀ ವ್ಯವಸ್ಥೆಯನ್ನು ಆಕ್ರಮಿಸಿಕೊಂಡಿದೆ ಮತ್ತು ಅವರು ಬಯಸಿದ ರೀತಿಯಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಜನ ಹೇಳುತ್ತಿದ್ದಾರೆ ಎಂದು ಪಿಕೆ ಹೇಳಿದ್ದಾರೆ.
ಚಂಪಾರಣ್ ಜನ ಲಾಲು ಅವರ ಜಂಗಲ್ ರಾಜ್ ಅನ್ನು ಇನ್ನೂ ಮರೆತಿಲ್ಲ ಮತ್ತು ಅವರು ಆಗಿನ ಆಡಳಿತವನ್ನು ಈಗಿನ ಸರ್ಕಾರದೊಂದಿಗೆ ಹೋಲಿಸುತ್ತಿದ್ದಾರೆ. ಲಾಲು ಅವರ ಜಂಗಲ್ ರಾಜ್ ಗಿಂತ ಈಗಿನ ಸ್ಥಿತಿ ಹೀನಾಯವಾಗಿದೆ ಎಂದು ಹಲವೆಡೆ ಜನ ಹೇಳುತ್ತಿದ್ದಾರೆ. ಕ್ರಿಮಿನಲ್ಗಳ ಬದಲಿಗೆ ಅವರ ಸ್ಥಾನದಲ್ಲಿ ಈಗ ಅಧಿಕಾರಿಗಳಿದ್ದಾರೆ ಮತ್ತು ಲಾಲು ಆಡಳಿತಕ್ಕಿಂತ ಶೋಷಣೆ ಹೆಚ್ಚಾಗಿದೆ ಎಂದು ಕಿಶೋರ್ ಹೇಳಿದರು.
ಕಿಶೋರ್ ಪ್ರಸ್ತುತ ತನ್ನ ಜನ್ ಸುರಾಜ್ ಆಂದೋಲನದ ಭಾಗವಾಗಿ ಪಾದಯಾತ್ರೆ ಕೈಗೊಂಡಿದ್ದು, ಇದು ಸುಮಾರು ಒಂದೂವರೆ ವರ್ಷ ನಡೆಯಲಿದೆ. ಈ ಅವಧಿಯಲ್ಲಿ ಪಾದಯಾತ್ರೆ ಇಡೀ ಬಿಹಾರ ರಾಜ್ಯವನ್ನು ಕ್ರಮಿಸಲಿದೆ. ಗಾಂಧಿ ಜಯಂತಿಯಂದು ಪಶ್ಚಿಮ ಚಂಪಾರಣ್‌ನ ಭೀತಿಹರ್ವಾದಲ್ಲಿರುವ ಗಾಂಧಿ ಆಶ್ರಮದಿಂದ ಪಿಕೆ ಪಾದಯಾತ್ರೆ ಆರಂಭಿಸಿದ್ದಾರೆ.
ಇದನ್ನು ಓದಿ:ಗುಜರಾತ್ ಚುನಾವಣೆ: ಸಾಮಾನ್ಯ ಕಾನ್ಸ್ಟೇಬಲ್ ಈಗ ಎಎಪಿಯ ಪ್ರಮುಖ ನೇತಾರ..