ಉನ್ನಾವೋ(ಉತ್ತರ ಪ್ರದೇಶ): ಅನೇಕ ಕಠಿಣ ಕಾನೂನಿನ ನಡುವೆ ಕೂಡ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದ್ದು, ಹೈದರಾಬಾದ್ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಉನ್ನಾವೋದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ದಲಿತ ಬಾಲಕಿಯೋರ್ವಳ ಮೇಲೆ ಅಮಾನವೀಯ ರೀತಿಯಲ್ಲಿ ಅತ್ಯಾಚಾರವೆಸಗಿ, ಬರ್ಬರವಾಗಿ ಕೊಲೆ ಮಾಡಲಾಗಿದೆ.
ಉನ್ನಾವೋದ ಕೊತ್ವಾಲಿ ಪ್ರದೇಶದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ವರದಿ ಪ್ರಕಾರ, ಬಾಲಕಿಯ ದೇಹದಲ್ಲಿನ ಮೂಳೆಗಳು ಮುರಿದಿದ್ದು, ವಿವಿಧ ಭಾಗಗಳಲ್ಲಿ ಗಂಭೀರವಾದ ಗಾಯಗಳಾಗಿವೆ. ತಲೆಯ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹತ್ತಲ್ಲ, ಇಪ್ಪತ್ತಲ್ಲ.. ಬರೋಬ್ಬರಿ 190 ಕಿ.ಮೀ ರೈಲಿನ ಇಂಜಿನ್ ಕೆಳಗೆ ಕುಳಿತು ಪ್ರಯಾಣಿಸಿದ ಭೂಪ!
ಕಳೆದ ಭಾನುವಾರ ರಾತ್ರಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಇದಕ್ಕೆ ಸಂಬಂಧಿಸಿದಂತೆ ಪೋಷಕರು ಪ್ರಕರಣ ದಾಖಲು ಮಾಡಿದ್ದರು. ಶೋಧಕಾರ್ಯ ನಡೆಸಿದ್ದ ಪೊಲೀಸರು ಸೋಮವಾರ ಬೆಳಗ್ಗೆ ಮನೆಯಿಂದ ಸುಮಾರು 1 ಕಿಲೋಮೀಟರ್ ದೂರದ ರೈಲ್ವೆ ಹಳಿ ಪಕ್ಕದಲ್ಲಿ ಆಕೆಯ ಮೃತದೇಹ ಪತ್ತೆ ಹಚ್ಚಿದ್ದರು. ಬಾಲಕಿಯ ದೇಹದ ಮೇಲೆ ಗಾಯದ ಗುರುತು ಪತ್ತೆಯಾಗಿದ್ದವು. ಘಟನಾ ಸ್ಥಳಕ್ಕಾಗಮಿಸಿದ ಉನ್ನಾವೋ ಎಸ್ಪಿ ದಿನೇಶ್ ತ್ರಿಪಾಠಿ ಪ್ರಕರಣ ದಾಖಲು ಮಾಡಿಕೊಂಡು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಈ ವೇಳೆ ವರದಿಯಲ್ಲಿ ಅತ್ಯಾಚಾರವೆಸಗಿ, ಕೊಲೆ ಮಾಡಿರುವುದು ದೃಢಪಟ್ಟಿದೆ.
ಬಾಲಕಿ ಕುಟುಂಬಸ್ಥರ ಪ್ರಕಾರ, ಆಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಆರೋಪ ಮಾಡಿದ್ದು, ಗ್ರಾಮದ ನಾಲ್ವರ ವಿರುದ್ಧ ದೂರು ಸಹ ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ವಿವಿಧ ತಂಡ ರಚನೆ ಮಾಡಿದ್ದು, ತನಿಖೆ ಆರಂಭವಾಗಿದೆ.