ಶಾಜಾಪುರ (ಮಧ್ಯಪ್ರದೇಶ): ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ದಲಿತ ಬಾಲಕಿಯೊಬ್ಬಳನ್ನು ತರಗತಿಗೆ ಹೋಗದಂತೆ ಖಾಸಗಿ ಶಾಲೆಯಲ್ಲಿ ತಡೆದ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ದುಪಾಡಾದಲ್ಲಿರುವ ಬಿಎಸ್‌ಪಿ ಖಾಸಗಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಬಾಲಕಿಗೆ ಪ್ರವೇಶ ನೀಡಲಾಗಿತ್ತು. ಪಂಚಾಯತ್ ಚುನಾವಣೆ ನಡೆದಾಗ ಶಾಲಾ ನಿರ್ದೇಶಕ ರವಿ ಪಾಟಿದಾರ್ ಎಂಬುವರ ಸೊಸೆ ಸ್ವಪ್ನಾ ಸಚಿನ್ ಪಾಟಿದಾರ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಬಾಲಕಿಯ ತಂದೆ ವಾಸಿಸುವ ವಾರ್ಡ್‌ನಿಂದ ಯಾವುದೇ ಮತದಾನವಾಗಿಲ್ಲ ಎಂದು ಆರೋಪಿಸಿ, ಬುಧವಾರ ಬಾಲಕಿ ಶಾಲೆಗೆ ಹೋದಾಗ ಶಾಲಾ ನಿರ್ದೇಶಕರು ಆಕೆಯನ್ನು ಒಳಬಿಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮಗಳನ್ನು ಯಾಕೆ ತರಗತಿಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಪೋಷಕರು ವಿಚಾರಿಸಿದಾಗ, "ನೀವು ನಮಗೆ ಬೆಂಬಲ ನೀಡಲಿಲ್ಲ ಮತ್ತು ಮತ ಹಾಕಲಿಲ್ಲ. ಹಾಗಾಗಿ, ನಾನು ನಿಮ್ಮ ಹುಡುಗಿಗೆ ಶಾಲೆಯಲ್ಲಿ ಕಲಿಸುವುದಿಲ್ಲ" ಎಂದು ನಿರ್ದೇಶಕ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ದಲಿತ ಕುಟುಂಬದ ಮೂವರನ್ನು ಗುಂಡಿಕ್ಕಿ ಕೊಂದ ದುರುಳರು.. ತಲೆಮರೆಸಿಕೊಂಡ ಆರು ಮಂದಿಗಾಗಿ ಶೋಧ
ಈ ಸಂಬಂಧ ಬಾಲಕಿಯ ತಂದೆ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಸಿಎಂ ಸಹಾಯವಾಣಿಗೆ ದೂರು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. "ಶಾಲೆ ಬಿಜೆಪಿ ಮುಖಂಡರದ್ದು. ನಾವು ದಲಿತರು. ಯಾರೂ ನಮ್ಮ ಮಾತು ಕೇಳುತ್ತಿಲ್ಲ" ಎಂದು ವಿದ್ಯಾರ್ಥಿನಿಯ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.