ಮುಂಬೈ: ಕಾರು ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಕಂಪನಿಯ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಹಾಗೂ ಅವರ ಜೊತೆಗಿದ್ದ ಪ್ರಯಾಣಿಕರೊಬ್ಬರು ಅಪಘಾತವಾದಾಗ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅತಿವೇಗದ ಚಾಲನೆ ಹಾಗೂ ಚಾಲಕನ ತಪ್ಪಿನಿಂದ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸಮಯದಲ್ಲಿ ಐಷಾರಾಮಿ ಕಾರು ಅತಿ ವೇಗವಾಗಿ ಚಲಿಸುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಚಾರೋಟಿ ಚೆಕ್ ಪೋಸ್ಟ್ ಅನ್ನು ದಾಟಿದ್ದ ಮರ್ಸಿಡಿಸ್ ಕಾರು ಅಲ್ಲಿಂದ ಮುಂದೆ ಕೇವಲ 9 ನಿಮಿಷಗಳಲ್ಲಿ 20 ಕಿಲೋಮೀಟರ್ ದೂರ ಕ್ರಮಿಸಿತ್ತು. ನಂತರ ಸೂರ್ಯ ನದಿಯ ಸೇತುವೆ ಮೇಲೆ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಹಾಗೂ ಜಹಾಂಗೀರ್ ಪಂಡೋಲೆ ಸ್ಥಳದಲ್ಲೇ ಮೃತಪಟ್ಟಿದ್ದರು.
ಮಿಸ್ತ್ರಿ ಅವರು ಅಹಮದಾಬಾದ್‌ನಿಂದ ಮುಂಬೈಗೆ ಹಿಂದಿರುಗುತ್ತಿದ್ದಾಗ ಮಧ್ಯಾಹ್ನ 2.30 ಕ್ಕೆ ಈ ದುರಂತ ಸಂಭವಿಸಿದೆ. ಮುಂಬೈ ಮೂಲದ ಸ್ತ್ರೀರೋಗ ತಜ್ಞೆ ಅನಾಹಿತಾ ಪಂಡೋಲೆ (55) ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಆಕೆ ಮತ್ತು ಡೇರಿಯಸ್ ಪಾಂಡೋಲೆ (60) ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿಂದಿನ ಸೀಟಿನಲ್ಲಿ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಲೆ ಇದ್ದರು. ಡೇರಿಯಸ್ ಪಂಡೋಲೆ ಮುಂದಿನ ಸೀಟಿನಲ್ಲಿದ್ದರು ಮತ್ತು ಅವರ ಪತ್ನಿ ಅನಾಹಿತಾ ಪಂಡೋಲೆ ಸ್ಟಿಯರಿಂಗ್ ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು ಮತ್ತು ಎಡಭಾಗದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದರು. ಆದರೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.