ಡಾರ್ಜಿಲಿಂಗ್ (ಪಶ್ಚಿಮಬಂಗಾಳ): ಇದೀಗ ಹಲವು ವರ್ಷಗಳ ಬಳಿಕ ವಿದೇಶದಿಂದ ಎರಡು ಸೈಬೀರಿಯನ್ ಹುಲಿಗಳನ್ನು ಭಾರತಕ್ಕೆ ಕರೆ ತರಲಾಗಿದೆ. ಆಗ್ನೇಯ ಯೂರೋಪ್ನ ಸೈಪ್ರಸ್ನ ಪಫೋಸ್ ಮೃಗಾಲಯದಿಂದ ಈ ಎರಡು ಹುಲಿಗಳನ್ನು ಕರೆತರಲಾಗಿದೆ. ಈ ಹುಲಿಗಳು ಭಾನುವಾರ ಪಶ್ಚಿಮಬಂಗಾಳದ ಪದ್ಮಜಾ ನಾಯ್ಡು ಝೂಲಾಜಿಕಲ್ ಪಾರ್ಕ್ಗೆ ಬಂದಿವೆ. ಲಾರಾ ಮತ್ತು ಅಕಮಾಸ್ ಎಂಬ ಸೈಬಿರಿಯನ್ ಹುಲಿಗಳು ಪದ್ಮಜಾ ನಾಯ್ಡು ಝೂಲಾಜಿಕಲ್ ಪಾರ್ಕ್ನ ಪ್ರಮುಖ ಆಕರ್ಷಣೆಯಾಗಲಿವೆ.
ಈ ಹುಲಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಈ ಸಂಬಂಧ ಸೈಬೀರಿಯನ್ ಹುಲಿಗಳಿಗೆ ವಿಶೇಷ ವೈದ್ಯಕೀಯ ತಂಡ ಮತ್ತು ವಿಶೇಷ ಆಹಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಎರಡು ಕೆಂಪು ಪಾಂಡಾಗಳನ್ನು ಯೂರೋಪ್ನ ಮೃಗಾಲಯಕ್ಕೆ ಭಾರತದಿಂದ ಕಳುಹಿಸಿಕೊಡಲಾಗಿದೆ.
ಕಳೆದ ಒಂದು ವರ್ಷದ ಹಿಂದೆಯೇ ಸೈಪ್ರಸ್ನಿಂದ ಎರಡು ಸೈಬಿರಿಯನ್ ಹುಲಿಗಳನ್ನು ಕರೆತರುವ ಬಗ್ಗೆ ಮಾತುಕತೆ ನಡೆದಿತ್ತು. 2011ರಲ್ಲಿ ದೇಶದಲ್ಲಿದ್ದ ಕೊನೆಯ ಸೈಬೀರಿಯನ್ ಹುಲಿ ಸಾವನ್ನಪ್ಪಿತ್ತು. ಈ ಹುಲಿಯನ್ನು ಮೂರು ವರ್ಷ ಇರುವಾಗ ಭಾರತಕ್ಕೆ ಕರೆತರಲಾಗಿತ್ತು. ಬಳಿಕ ವಯೋಸಹಜ ಕಾಯಿಲೆಯಿಂದಾಗಿ 18ನೇ ವಯಸ್ಸಿಗೆ ಸಾವನ್ನಪ್ಪಿತ್ತು.
ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಕಾರ, ಭಾರತದಲ್ಲಿ ಎಲ್ಲಿಯೂ ಸೈಬೀರಿಯನ್ ಹುಲಿಗಳು ಇಲ್ಲ. ಈ ಸಂಬಂಧ ಎರಡು ಹುಲಿಗಳನ್ನು ಕರೆತರಲಾಗಿದೆ. ಹೊಸ ವರ್ಷಕ್ಕೂ ಮೊದಲು ಎರಡು ಅತಿಥಿಗಳು ಡಾರ್ಜಿಲಿಂಗ್ನ ಮೃಗಾಲಯಕ್ಕೆ ಬಂದಿವೆ.
ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾ : ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳನ್ನು ಬಿಡುಗಡೆ ಮಾಡಿದ್ದರು. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ದೇಶಕ್ಕೆ ತರಲಾಗಿತ್ತು. ಇದರಲ್ಲಿ ಕೆಲವು ಚೀತಾಗಳು ಸಾವನ್ನಪ್ಪಿದ್ದು, ಉಳಿದ 14 ಚೀತಾಗಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಈ ವರ್ಷ ಮಾರ್ಚ್‌ನಿಂದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 9 ಚೀತಾಗಳು ಸಾವನ್ನಪ್ಪಿವೆ. ಇತರ ದೇಶಗಳಲ್ಲಿ ಬೇಟೆಯಾಡುವುದು ಸಾವಿಗೆ ಕಾರಣವಾಗುತ್ತದೆ. ಆದರೆ ನಮ್ಮಲ್ಲಿನ ಯಾವುದೇ ಚೀತಾ ಬೇಟೆಯಾಡಿ, ವಿಷಪ್ರಾಶನ ಅಥವಾ ಮಾನವ ಸಂಘರ್ಷದಿಂದ ಸಾವನ್ನಪ್ಪಿಲ್ಲ. ಚೀತಾಗಳ ಸಾವಿಗೆ ರೇಡಿಯೋ ಕಾಲರ್ ಕಾರಣ ಎಂದು ಸಂಶಯಿಸಲಾಗಿತ್ತು. ಆದರೆ ರೆಡಿಯೋ ಕಾಲರ್ನಿಂದ ಚೀತಾಗಳ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.