ಮುಂಬೈ: ತೌಕ್ತೆ ಚಂಡಮಾರುತವು ಕರ್ನಾಟಕ ದಾಟಿ ಮಹಾರಾಷ್ಟ್ರ ಮತ್ತು ಗುಜರಾತ್ ಕಡೆ ಮುಖ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಬೃಹನ್ ಮುಂಬೈ ಮಹಾನಗರ ಪಾಲಿಕೆ ನಗರದ ಕೋವಿಡ್ ಆರೈಕೆ ಕೇಂದ್ರಗಳಿಂದ 580 ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.
ಬಿಕೆಸಿ (243), ದಹಿಸರ್ (183) ಮತ್ತು ಮುಲುಂಡ್ (154) ಜಂಬೋ ಕೋವಿಡ್ ಆರೈಕೆ ಕೇಂದ್ರಗಳಿಂದ ಒಟ್ಟು 580 ರೋಗಿಗಳನ್ನು ಮುಂಬೈನ ರಾಜ್ಯ ಮತ್ತು ನಾಗರಿಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಭಾನುವಾರ ಚಂಡಮಾರುತವು ನಗರಕ್ಕೆ ಹತ್ತಿರವಾಗಬಹುದು ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದ್ದರಿಂದ ಈ ಕ್ರಮವಾಗಿ ಬಾಂದ್ರಾ-ವರ್ಲಿ ಸೀ ಲಿಂಕ್ ಅನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ.
ಇದನ್ನು ಓದಿ: 6 ಗಂಟೆಯಲ್ಲಿ ತೀವ್ರ ಸ್ವರೂಪ; ಮೇ 18 ರಂದು ಗುಜರಾತ್ ಕರಾವಳಿ ದಾಟಲಿರುವ ಸೈಕ್ಲೋನ್ ತೌಕ್ತೆ
ಈ ವರ್ಷ ಮೊದಲ ಬಾರಿಗೆ ಭಾರತೀಯ ಕರಾವಳಿಯನ್ನು ಅಪ್ಪಳಿಸಿದ ತೌಕ್ತೆ ಚಂಡಮಾರುತವು ತೀವ್ರವಾದ ಚಂಡಮಾರುತ ಎಂದು ಹೇಳಲಾಗಿದೆ. ಗುಜರಾತ್ ಕರಾವಳಿ ಮತ್ತು ಕೇಂದ್ರ ಪ್ರದೇಶವಾದ ದಮನ್ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿಗೆ ಸಾಗುತ್ತಿದೆ ಎಂದು ಐಎಂಡಿ ಶನಿವಾರ ರಾತ್ರಿ ಹೇಳಿದೆ.
ಚಂಡಮಾರುತವು ಶನಿವಾರ ತಡವಾಗಿ ಅಥವಾ ಭಾನುವಾರ ಮುಂಬೈ ಕರಾವಳಿಯನ್ನು ದೂರದಿಂದ ಹಾದುಹೋಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿತ್ತು. ಇದು ಮುಂಬೈ, ಥಾಣೆ ಮತ್ತು ಪಾಲ್ಘರ್‌ನ ಕೆಲವು ಸ್ಥಳಗಳಲ್ಲಿ ಗಾಳಿ ಮತ್ತು ಭಾರೀ ಮಳೆಯನ್ನು ಉಂಟುಮಾಡುತ್ತದೆ.
ಚಂಡಮಾರುತವು ಮೇ 18ರ ಸುಮಾರಿಗೆ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ. ಗಾಳಿ ಗಂಟೆಗೆ 175 ಕಿ.ಮೀ. ವೇಗದಲ್ಲಿ ಬೀಸುತ್ತದೆ ಎಂದು ಐಎಂಡಿ ತಿಳಿಸಿದೆ.