ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜೊತೆ ವಾಟ್ಸ್ಆ್ಯಪ್ ಸಂದೇಶ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೋಮವಾರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಹಾಜರಾಗಬೇಕಿತ್ತು. ಆದರೆ, ಅವರು ವಿಚಾರಣೆಗೆ ಬಂದಿಲ್ಲ ಎಂದು ಎನ್ ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಂಡೆಯವರನ್ನು ಕಳೆದ ವಾರ ಎರಡು ದಿನಗಳ ಕಾಲ ಎನ್‌ಸಿಬಿ ವಿಚಾರಣೆಗೆ ಒಳಪಡಿಸಿತ್ತು ಮತ್ತು ಸೋಮವಾರ ಮತ್ತೆ ಕರೆ ಮಾಡಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಈ ಮೂರನೇ ಸುತ್ತಿನ ವಿಚಾರಣೆಗೆ ಹಾಜರಾಗಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮುಂಬೈ ಕರಾವಳಿಯಲ್ಲಿನ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ಆರ್ಯನ್ ಖಾನ್ ಜೊತೆಗಿನ ವಾಟ್ಸ್ಆ್ಯಪ್ ಚಾಟ್‌ಗಳಿಗೆ ಸಂಬಂಧಿಸಿದಂತೆ ಪಾಂಡೆಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಶುಕ್ರವಾರ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಟಿಯನ್ನು ಗುರುವಾರ ಕೂಡ ಸುಮಾರು ಎರಡು ಗಂಟೆಗಳ ಕಾಲ ಪ್ರಶ್ನಿಸಲಾಗಿದೆ.
ಡ್ರಗ್ಸ್ ಪ್ರಕರಣವನ್ನು ಎನ್‌ಸಿಬಿ ತನಿಖೆ ನಡೆಸುತ್ತಿದ್ದು, ಇದರಲ್ಲಿ ಆರ್ಯನ್ ಖಾನ್ (23) ನನ್ನು ಹಾಗೂ ಇತರ 19 ಮಂದಿಯನ್ನ ಬಂಧಿಸಲಾಗಿದೆ. ಆರ್ಯನ್ ಖಾನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ. ಹಾಗೆ ಅವರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ನಾಳೆ ವಿಚಾರಣೆ ಮಾಡುವ ಸಾಧ್ಯತೆಯಿದೆ.